ಉಡುಪಿ: ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ಈ ಕ್ಷೇತ್ರ ನನ್ನದೇ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳುವ ಮೂಲಕ ಕ್ಷೇತ್ರದ ಟಿಕೇಟ್ ಬೇರೆಯವರಿಗೆ ಕೊಡುವ ಸಾಧ್ಯತೆಯನ್ನು ಅಲ್ಲಗಳೆದಿದ್ದಾರೆ.
ಕನಿಷ್ಠ 5-6 ಕ್ಷೇತ್ರಗಳು ನನ್ನ ಹೆಸರನ್ನು ಹೇಳುತ್ತಿವೆ. ಆದರೆ ಉಡುಪಿ- ಚಿಕ್ಕಮಗಳೂರು ನನ್ನ ಕ್ಷೇತ್ರ. ಈ ಕ್ಷೇತ್ರದ ಜನರು ನನ್ನನ್ನು ಗೆಲ್ಲಿಸಿದ್ದರು. ನಾನು ಬೇರೆ ಕ್ಷೇತ್ರಗಳಿಗೆ ಹೋಗುವ ಪ್ರಶ್ನೆಯೇ ಇಲ್ಲ. ಆದರೆ ಪಕ್ಷ ಬದಲಾವಣೆ ಬಯಸಿದಲ್ಲಿ ಅದನ್ನು ಪಾಲಿಸಿ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರುತ್ತೇನೆ ಎಂದು ಹೇಳಿದ್ದಾರೆ.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ನನ್ನ ಅಭಿವೃದ್ಧಿ ಕಾರ್ಯಗಳ ಆಧಾರದ ಮೇಲೆ ಪ್ರಚಾರಕ್ಕೆ ಹೋಗಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.
ದಿಲ್ಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗಳ ಕುರಿತು ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ, ಆ ಪ್ರತಿಭಟನೆಗಳು ರಾಜಕೀಯ ಆಧಾರಿತವಾಗಿವೆ. ನಾವು 22 ಬೆಳೆಗಳಿಗೆ ಎಂಎಸ್ಪಿ ನೀಡುತ್ತಿದ್ದೇವೆ. ಆದರೂ ರೈತರು ದೆಹಲಿಗೆ ಬಂದಿದ್ದಾರೆ. ಚುನಾವಣೆ ಸಮೀಪಿಸುತ್ತಿರುವಂತೆಯೇ ಇದು ರೈತರ ಹೆಸರಿನಲ್ಲಿ ನಡೆಯುತ್ತಿರುವ ರಾಜಕೀಯ ಆಧಾರಿತ ಪ್ರತಿಭಟನೆಯಾಗಿದೆ. ಇದು ಕೆಲವು ಸಂಘಟನೆಗಳು ಮತ್ತು ಅಂತರಾಷ್ಟ್ರೀಯ ಚಳವಳಿಗಳ ಷಡ್ಯಂತ್ರದ ಭಾಗವಾಗಿದೆ. ಕೇಂದ್ರ ಸರ್ಕಾರ ಚರ್ಚೆಗೆ ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ ಸರ್ಕಾರಿ ನೌಕರರ ಸಂಬಳ ವಿಳಂಬವಾಗಿದೆ, ಎರಡು ತಿಂಗಳ ಹಿಂದೆ ನ್ಯಾಯಾಧೀಶರ ಸಂಬಳ ಎಂಟು ದಿನ ವಿಳಂಬವಾಗಿತ್ತು. ಇದು ಕರ್ನಾಟಕದ ಹಣೆಬರಹ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಮಂಗಳೂರಿನ ಸಂತ ಜೆರೋಸ ಶಾಲೆಯ ಶಿಕ್ಷಕಿ, ಸಿಸ್ಟರ್ ಪ್ರಭಾ ಎಂಬಾಕೆ ಶ್ರೀರಾಮ, ಅಯೋಧ್ಯೆ ಹಾಗು ಹಿಂದೂ ಆರಾಧನಾ ಪದ್ಧತಿಯ ಬಗ್ಗೆ ವಿದ್ಯಾರ್ಥಿಗಳೆದುರು ಕೀಳಾಗಿ ಮಾತನಾಡಿ ಮಕ್ಕಳನ್ನು ಮಾನಸಿಕವಾಗಿ ಮತಾಂತರ ಮಾಡಲು ಯತ್ನಿಸುತ್ತಿದ್ದದ್ದನ್ನು ಖಂಡಿಸಿ ಶಾಲೆಯ ವಿದ್ಯಾರ್ಥಿಗಳು, ಪೋಷಕರು, ಹಳೆ ವಿದ್ಯಾರ್ಥಿಗಳೊಂದಿಗೆ ಪ್ರತಿಭಟಿಸಿದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್, ಉತ್ತರ ಕ್ಷೇತ್ರದ ಶಾಸಕ ಭರತ ಶೆಟ್ಟಿ, ವಿಹಿಂಪ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಹಾಗೂ ಇನ್ನಿತರ ಹಿಂದೂ ಮುಖಂಡರ ವಿರುದ್ಧ ಕೇಸ್ ದಾಖಲಿಸಿರುವುದನ್ನು ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳೀಕೃಷ್ಣ ಹಸಂತ್ತಡ್ಕ ತೀವ್ರವಾಗಿ ಖಂಡಿಸಿ, ಹಿಂದೂಗಳ ಶ್ರದ್ಧೆಯ ಮೇಲೆ ದಾಳಿ ನಡೆಸಲು ಯತ್ನಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ರಾಜ್ಯ ಕಾಂಗ್ರೇಸ್ ಸರಕಾರ ಹಿಂದೂ ನಾಯಕರ ವಿರುದ್ಧ ಕೇಸ್ ದಾಖಲಿಸಿರುವುದು ಅಲ್ಪಸಂಖ್ಯಾತರ ತುಷ್ಟೀಕರಣದ ಪರಮಾವಧಿಯಾಗಿದೆ. ಸರಕಾರ ಇದೇ ರೀತಿ ಹಿಂದೂಗಳ ಭಾವನೆಗಳ ಜೊತೆ ಚೆಲ್ಲಾಟವಾಡುವುದನ್ನು ಮುಂದುವರೆಸಿದಲ್ಲಿ ಮುಂದಾಗುವ ಅನಾಹುತಗಳಿಗೆ ಸರಕಾರವೇ ಹೊಣೆಯಾಗಲಿದೆ ಎಂದು ಎಚ್ಚರಿಸಿದ್ದಾರೆ.