ಬೆಂಗಳೂರು: ಬಿಜೆಪಿ ನಾಯಕರನ್ನು ಗೂಂಡಾಗಳು ಎಂದು ಕರೆದಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
ವಿಧಾನಸಭೆಯಲ್ಲಿ ಈ ಪದ ಬಳಸಿದ ಕುರಿತು ಮಾತನಾಡಿರುವ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಗೂಂಡಾಗಿರಿ ಮಾಡ್ತೀರಾ ಎಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ನಾಲ್ಕೈದು ನಿಮಿಷದಲ್ಲಿ ಉತ್ತರಿಸಬಹುದಾಗಿದ್ದ ಪ್ರಶ್ನೆಗೆ ಸಿಎಂ ಸಿದ್ಧರಾಮಯ್ಯ ಉತ್ತರಿಸುವಾಗ ಗಂಟೆಗಟ್ಟಲೆ ಕೇಂದ್ರವನ್ನು ಟೀಕಿಸಿ ಆಕ್ಷೇಪ ವ್ಯಕ್ತಪಡಿಸಿದರು. ಅವರು ಉತ್ತರಿಸುವ ಬದಲು ಎಲ್ಲಾ ಪ್ರತಿಪಕ್ಷದ ಸದಸ್ಯರನ್ನು ಗೂಂಡಾಗಳು ಎಂದು ಕರೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಇತಿಹಾಸದಲ್ಲಿ ಮುಖ್ಯಮಂತ್ರಿಯೊಬ್ಬರು ‘ಗೂಂಡಾ’ ಪದವನ್ನು ಬಳಸಿರುವುದನ್ನು ನಾನು ನೋಡಿಲ್ಲ. ಅವರು ತಮ್ಮ ಮಾತನ್ನು ವಾಪಸ್ ಪಡೆದು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದೇವೆ. ಸಿಎಂ ಹೇಳಿಕೆ ಖಂಡಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು ಎಂದು ಪೂಜಾರಿ ವಿವರಿಸಿದರು. ತೆರಿಗೆ ಹಂಚಿಕೆ ಕುರಿತು ಕಾಂಗ್ರೆಸ್ ಸದಸ್ಯ ಯು. ಬಿ. ವೆಂಕಟೇಶ್ ಕೇಳಿದ ಪ್ರಶ್ನೆಗೆ ಸಿದ್ಧರಾಮಯ್ಯ ಉತ್ತರಿಸುತ್ತಿದ್ದಾಗ ಗೊಂದಲ ಶುರುವಾಯಿತು. ದೇಶದಲ್ಲಿ ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ, ಆದರೆ ಪ್ರತಿಯಾಗಿ ಕೇಂದ್ರದಿಂದ ರಾಜ್ಯದ ಪಾಲು ಕಡಿಮೆಯಾಗುತ್ತಿದೆ. ಕೇಂದ್ರ ಬಜೆಟ್ ನ ಗಾತ್ರ ದ್ವಿಗುಣಗೊಂಡಿದ್ದರೂ ಕರ್ನಾಟಕದ ಪಾಲು ಹೆಚ್ಚಿಲ್ಲ ಎಂಬ ಸಿದ್ಧರಾಮಯ್ಯ ಹೇಳಿಕೆಗೆ ಬಿಜೆಪಿ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಸಿದ್ಧರಾಮಯ್ಯ ತಮ್ಮ ಭಾಷಣವನ್ನು ಪೂರ್ಣಗೊಳಿಸಿದ ನಂತರ ಮಾತನಾಡಲು ಬಿಜೆಪಿ ಸದಸ್ಯರನ್ನು ಕೇಳಿದರು, ಆದರೆ ಅವರು ತಮ್ಮ ಆಕ್ಷೇಪವನ್ನು ಮುಂದುವರಿಸಿದಾಗ, ನಾನು ಗೂಂಡಾಗಿರಿಗೆ ಹೆದರುವುದಿಲ್ಲ. ಏಳು ಕೋಟಿ ಜನ ವೀಕ್ಷಿಸುತ್ತಿದ್ದಾರೆ. ನೀವು ಎದ್ದು ನಿಂತಿದ್ದರೆ, ನೀವು ತಪ್ಪು ಮಾಡಿದ್ದೀರಿ ಎಂದರ್ಥ ಎಂದು ವಾಕ್ ಸಮರ ನಡೆಸಿದರು. ಈ ಹಿಂದೆ ಪ್ರತಿಪಕ್ಷಗಳನ್ನು ಹೋರಾಟಕ್ಕೆ ಆಹ್ವಾನಿಸುವ ಇಂಗಿತ ವ್ಯಕ್ತಪಡಿಸಿದವರು ಯಾರು ಎಂದು ಸಿದ್ಧರಾಮಯ್ಯ ಅವರನ್ನು ಪ್ರಶ್ನಿಸಿದ ಕೋಟ ಶ್ರೀನಿವಾಸ ಪೂಜಾರಿ, ಈಗ ನೀವು ನಮ್ಮ ವಿರುದ್ಧ ಗೂಂಡಾಗಿರಿ ಆರೋಪ ಮಾಡುತ್ತಿದ್ದೀರಿ ಎಂದು ಹೇಳಿದರು. ಸಿಟ್ಟಿಗೆದ್ದ ಸಿದ್ಧರಾಮಯ್ಯ ನೀವು ಗೂಂಡಾಗಳು. ನಾನು ನಿಮಗೆ ಹೆದರುವುದಿಲ್ಲ. ನಾನು ಸತ್ಯವನ್ನೇ ಹೇಳುತ್ತಿದ್ದೇನೆ. ಜನರು ನಿಮ್ಮನ್ನು ಶಪಿಸುತ್ತಿದ್ದಾರೆ. ನನ್ನ ತೆರಿಗೆ ನನ್ನ ಹಕ್ಕು ಎಂದು ಕಿಡಿಕಾರಿದರು. ಬಿಜೆಪಿ ಸದಸ್ಯರು ಗೂಂಡಾ ಕಾಂಗ್ರೆಸ್ ಸರ್ಕಾರ ಎಂದು ಘೋಷಣೆಗಳನ್ನು ಕೂಗಲಾರಂಭಿಸಿದರು.