ಪುತ್ತೂರು: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸೋಲಿನ ಹತಾಶೆಯಲ್ಲಿರುವ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ಜಾತಿ ವಿಚಾರದಲ್ಲಿ ಅವಮಾನಿಸಿರುವುದು ಖಂಡನೀಯ. ಈ ಕುರಿತು ರಾಹುಲ್ ಗಾಂಧಿ ದೇಶದ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಆರ್.ಸಿ. ನಾರಾಯಣ ಆಗ್ರಹಿಸಿದ್ದಾರೆ.
ಅವರು ಮಂಗಳವಾರ ಬಿಜೆಪಿ ಪುತ್ತೂರು ನಗರ ಹಾಗೂ ಗ್ರಾಮಾಂತರ ಮಂಡಲದ ಒಬಿಸಿ ಮೋರ್ಚಾದಿಂದ ಬಿಜೆಪಿ ಕಚೇರಿ ಎದುರು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ವಿಶ್ವಗುರು ಎಂದು ಉಲ್ಲೇಖಿಸಲ್ಪಟ್ಟ ನರೇಂದ್ರ ಮೋದಿಯವರ ಮೇಲಿನ ಹೊಟ್ಟೆಕಿಚ್ಚಿನಿಂದ ಸಹಿಸಲಾಗದೆ ಅವರ ವಿರುದ್ಧ ರಾಹುಲ್ ಗಾಂಧಿ ಇಲ್ಲಸಲ್ಲದ ಮಾತುಗಳಿಂದ ಮಾತನಾಡುತ್ತಿದ್ದು, ಜಾತಿ ರಾಜಕಾರಣ ಮುಂದಿಟ್ಟುಕೊಂಡು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಎಲ್ಲರ, ಬಿಜೆಪಿಯವರ ಭಾವನೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮಾಡುತ್ತಿರುವ ರಾಹುಲ್ ಗಾಂಧಿ ದೇಶದ, ಹಿಂದುಳಿದ ವರ್ಗಗಳ ಕ್ಷಮೆ ಯಾಚಿಸುವ ಜತೆಗೆ ಗೌರವದ ರಾಜಕಾರಣ ಮಾಡಲಿ. ಇಲ್ಲದಿದ್ದಲ್ಲಿ ಕಾಂಗ್ರೆಸ್ ನವರನ್ನು ಯಾವ ಬೀದಿಯಲ್ಲಿ ಎಲ್ಲಿ ನಿಲ್ಲಿಸಬೇಕು ಎಂಬುದನ್ನು ಬಿಜೆಪಿ ಮಾಡಿ ತೋರಿಸುತ್ತದೆ ಎಂದ ಅವರು, ಜಾತಿ ರಾಜಕಾರಣದಲ್ಲಿ ತೊಡಗಿದರೆ ನಿರ್ನಾಮ ಆಗುತ್ತೀರಿ ಎಂದು ಎಚ್ಚರಿಕೆ ನೀಡಿದರು.
ಬಳಿಕ ಸಹಾಯಕ ಆಯುಕ್ತರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಒಬಿಸಿ ಮೋರ್ಚಾ ಗ್ರಾಮಾಂತರ ಮಂಡಲ ಅಧ್ಯಕ್ಷ ಸುನಿಲ್ ದಡ್ಡು, ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ. ಜಿ. ಜಗನ್ನಿವಾಸ ರಾವ್, ಪುತ್ತೂರು ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಮುಖಂಡರಾದ ಅಪ್ಪಯ್ಯ ಮಣಿಯಾಣಿ, ಯುವರಾಜ ಪೆರಿಯತ್ತೋಡಿ, ನಿತೀಶ್ ಕುಮಾರ್ ಶಾಂತಿವನ, ಪುರುಷೋತ್ತಮ ಮುಂಗ್ಲಿಮನೆ, ವಿದ್ಯಾ ಆರ್., ಗೌರಿ, ಜಯಶ್ರೀ ಶೆಟ್ಟಿ, ದಿವ್ಯಾ ಪುರುಷೋತ್ತಮ, ದೀಕ್ಷಾ ಪೈ, ಗೌರಿ ಬನ್ನೂರು, ಸಹಜ್ ರೈ, ಹರೀಶ್ ಬಿಜತ್ರೆ ಮತ್ತಿತರರು ಉಪಸ್ಥಿತರಿದ್ದರು.