ಮುಸ್ಲಿಂ ದೇಶ ಕತಾರ್‌ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ 8 ಭಾರತೀಯರು ರಿಲೀಸ್ ಆಗುವ ಮೂಲಕ ಭಾರತಕ್ಕೆ ಅತಿದೊಡ್ಡ ರಾಜತಾಂತ್ರಿಕ ಗೆಲುವಾಗಿದೆ. ಪ್ರಧಾನಿ ಮೋದಿ, ಜೈಶಂಕರ್ ರಾಜತಾಂತ್ರಿಕತೆ, ದೋವಲ್ ತಂತ್ರಗಾತಿಕೆ ಫಲ ನೀಡಿದೆ.
ಸದ್ಯ ಕತಾರ್‌ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ 7 ನಿವೃತ್ತ ಯೋಧರು ವಾಪಸ್ ಆಗಿದ್ದಾರೆ. ದೆಹಲಿ ವಿಮಾನ ನಿಲ್ದಾಣಕ್ಕೆ ನಿವೃತ್ತ ಯೋಧರು ಬಂದಿಳಿದಿದ್ದು, ತಮ್ಮ ಕುಟುಂಬದವರನ್ನು ಸೇರಿದ್ದಾರೆ. 18 ತಿಂಗಳಿನಿಂದ ಕತಾರ್‌ನಲ್ಲಿ ಜೈಲು ವಾಸ ಅನುಭವಿಸುತ್ತಿದ್ದರು. ಕತಾರ್‌ನಲ್ಲಿ ಇಸ್ರೇಲ್ ಪರವಾಗಿ ಬೇಹುಕಾರಿಗೆ ನಡೆಸಿದ ಆರೋಪ ಇವರ ಮೇಲಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ 3 ಬಾರಿ ಕತಾರ್‌ಗೆ ಭೇಟಿ ನೀಡಿದ್ದರು. ಮುಸ್ಲಿಂ ದೇಶಗಳಲ್ಲಿ ವಿದೇಶಿಯರಿಗೆ ಗಲ್ಲು ಶಿಕ್ಷೆಯಾದ್ರೆ ಮೃತದೇಹವೂ ಸಿಗೋದಿಲ್ಲ. ಅದರಲ್ಲೂ ಬೇಹುಗಾರಿಕೆ ಆರೋಪದಲ್ಲಿ ಸಿಲುಕಿದರೆ ಕ್ಷಮಾಧಾನ ದೂರದ ಮಾತಾಗಿದೆ.
ಕತಾರ್‌ನಲ್ಲಿ ಇಸ್ರೇಲ್ ಪರ ಬೇಹುಗಾರಿಕೆ ನಡೆಸಿದ ಆರೋಪದಡಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ 8 ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳನ್ನು ಕತಾರ್ ಸರ್ಕಾರ ಬಿಡುಗಡೆ ಗೊಳಿಸಿದೆ. ಬಿಡುಗಡೆಗೊಂಡು ದೇಶಕ್ಕೆ ಆಗಮಿಸಿ ಮಾಜಿ ಅಧಿಕಾರಿಗಳು, ವೈಯಕ್ತಿಕವಾಗಿ ಪ್ರಧಾನಿ ಮೋದಿ ಈ ವಿಚಾರದಲ್ಲಿ ತೆಗೆದುಕೊಂಡು ಮುತುವರ್ಜಿಯನ್ನು ಕೊಂಡಾಡಿದ್ದಾರೆ. ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳಾದ ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕ್ಯಾಪ್ಟನ್ ಸೌರಭ್ ವಸಿಷ್ಠ, ಕಮಾಂಡರ್ ಅಮಿತ್ ನಾಗಪಾಲ್, ಕಮಾಂಡರ್ ಪೂರ್ಣೇಂದು ತಿವಾರಿ, ಕಮಾಂಡರ್ ಸುಗುಣಾಕರ್ ಪಾಕಳ, ಕಮಾಂಡರ್ ಸಂಜೀವ್ ಗುಪ್ತಾ ಹಾಗೂ ಸೈಲರ್ ರಾಗೇಶ್ ವಿರುದ್ಧ ಕತಾರ್ ನ್ಯಾಯಾಲಯವೂ ಕಳೆದ ವರ್ಷದ ಆಕ್ಟೋಬರ್‌ನಲ್ಲಿ ಗಲ್ಲುಶಿಕ್ಷೆಯ ತೀರ್ಪು ನೀಡಿ ಆದೇಶಿಸಿತ್ತು.
ಕತಾರ್‌ನ ಸೇನೆಯ ಯೋಧರಿಗೆ ತರಬೇತಿ ಮತ್ತು ಇತರೆ ವಿಷಯದಲ್ಲಿ ಅಲ್ ದಹ್ರಾ ಎಂಬ ಕಂಪನಿ ಸೇವೆ ನೀಡುತ್ತದೆ. ಈ ಕಂಪನಿಯಲ್ಲಿ ನೌಕರರಾಗಿದ್ದ 8 ಭಾರತೀಯರನ್ನು ಕಳೆದ ವರ್ಷದ ಆಗಸ್ಟ್‌ನಲ್ಲಿ ಕತಾರ್ ಪೊಲೀಸರು ಬಂಧಿಸಿದ್ದರು. ಬಳಿಕ ಭಾರತ ಸರ್ಕಾರಕ್ಕಾಗಲೀ, ಭಾರತದಲ್ಲಿರುವ ಅವರ ಕುಟುಂಬಕ್ಕಾಗಲೀ ಯಾವುದೇ ಮಾಹಿತಿ ನೀಡದೆ ಕೋರ್ಟ್‌ನಲ್ಲಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿತ್ತು. ಗಲ್ಲುಶಿಕ್ಷೆಗೆ ಗುರಿಯಾದ ಎಂಟು ಮಂದಿಯ ವಿರುದ್ಧ ಕತಾರ್ ಪೊಲೀಸರು ಇಸ್ರೇಲ್‌ನ ಪರ ಗೂಢಚರ್ಯೆ ನಡೆಸಿದ ಆರೋಪ ಹೊರಿಸಿದ್ದರು. ಅದನ್ನು ಸಾಬೀತುಪಡಿಸಲು ಅವರ ಬಳಿ ಎಲೆಕ್ಟ್ರಾನಿಕ್ ಸಾಕ್ಷ್ಯಗಳಿವೆ ಎಂದು ಪತ್ರಿಕೆಯೊಂದು ಈ ಹಿಂದೆ ವರದಿ ಮಾಡಿತ್ತು.ಇವರೆಲ್ಲರೂ ದಹ್ರಾ ಗ್ಲೋಬಲ್ ಟೆಕ್ನಾಲಜೀಸ್‌ನಲ್ಲಿ ನೌಕರಿ ಮಾಡುತ್ತಿದ್ದರು. ಇಟಲಿ ಮೂಲದ ತಂತ್ರಜ್ಞಾನ ಬಳಸಿ ರಹಸ್ಯವಾಗಿ ದಾಳಿ ನಡೆಸುವ ಸಬ್‌ಮರೀನ್‌ಗಳನ್ನು ಉತ್ಪಾದಿಸುವ ಯೋಜನೆಯಲ್ಲಿ ಇವರು ತೊಡಗಿದ್ದರು. ಈ ವೇಳೆ ಇವರೆಲ್ಲಾ ಗೂಢಚರ್ಯೆ ನಡೆಸಿ ಕತಾರ್ ಸೇನೆಯ ಕುರಿತ ರಹಸ್ಯ ಮಾಹಿತಿಗಳನ್ನು ಇಸ್ರೇಲ್‌ಗೆ ರವಾನಿಸಿದ್ದಾರೆ ಎಂಬ ಆರೋಪ ಹೊರಿಸಲಾಗಿದೆ. ಆ ಸಂದರ್ಭದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಭಾರತೀಯ ವಿದೇಶಾಂಗ ಇಲಾಖೆ ಆರೋಪಿಗಳ ಕುಟುಂಬದ ಜೊತೆ ಹಾಗೂ ಕಾನೂನು ತಂಡದ ಜೊತೆಗೆ ಸಂಪರ್ಕದಲ್ಲಿದ್ದೇವೆ. ಗಲ್ಲುಶಿಕ್ಷೆ ಎದುರಿಸುತ್ತಿರುವ ಭಾರತೀಯರನ್ನು ರಕ್ಷಿಸಲು ಎಲ್ಲಾ ಕಾನೂನು ಆಯ್ಕೆಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಹೇಳಿತ್ತು. ಪ್ರಧಾನಿ ನರೇಂದ್ರ ಮೋದಿಯವರು ಕೂಡ ಈ ವಿಚಾರದಲ್ಲಿ ವ್ಯಯಕ್ತಿಕವಾಗಿ ಕತಾರ್ ಅಧ್ಯಕ್ಷರ ಜೊತೆಗೆ ಮಾತುಕತೆ ನಡೆಸಿದ್ದರು, ಜೊತೆಗೆ ಭಾರತೀಯ ವಿದೇಶಾಂಗ ಇಲಾಖೆಯೂ ಅಗತ್ಯ ಕ್ರಮ ಕೈಗೊಂಡಿತ್ತು. ಪರಿಣಾಮ ಈಗ ಭಾರತೀಯ ನೌಕಾಸೇನೆಯ 8 ಅಧಿಕಾರಿಗಳು ಬಿಡುಗಡೆಯಾಗಿದ್ದಾರೆ.