ಪುತ್ತೂರು: ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿಯ ಸ್ಥಾಪಕ ಅಧ್ಯಕ್ಷ ಸೇಸಪ್ಪ ಬೆದ್ರಕಾಡು ಹಾಗೂ ನೆಲ್ಯಾಡಿ ಮೊರಂಕಲ ಅಣ್ಣು ನಾಯ್ಕರ ಕುರಿತು ದಲಿತ ಸಂಘರ್ಷ ಸಮಿತಿ ಭೀಮವಾದ ಉಡುಪಿ ಜಿಲ್ಲೆಯ ವಿಶ್ವನಾಥ ಬೆಳ್ಳಂಪಳ್ಳಿ ಅವರು ಸ್ವಯಂ ಘೋಷಿತ ಮುಖಂಡ, ವಸೂಲುಗಾರನೆಂದು ಹೀನಾಯ ಶಬ್ದಗಳಿಂದ ಮಾತನಾಡಿದ್ದು, ಯಾವುದೇ ವ್ಯಕ್ತಿಯ ಪೂರ್ವಾಪರ ತಿಳಿಯದೇ ಹೀಗೆ ಮಾತನಾಡುವುದು ಖಂಡನೀಯ ಎಂದು ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ ಕಾರ್ಯಾಧ್ಯಕ್ಷ ಚಂದ್ರಶೇಖರ ತಿಳಿಸಿದ್ದಾರೆ.
ಮಂಗಳವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಶಬ್ಧಗಳಿಂದ ಮಾತನಾಡಿರುವುದು ಜಿಲ್ಲೆಯ ಹಲವು ದಲಿತ ಮುಖಂಡರಿಗೆ, ಕಾರ್ಯಕರ್ತರಿಗೆ ನೋವಾಗಿದೆ. ಅಣ್ಣು ನಾಯ್ಕರ ಜಾಗದ ವಿಚಾರದ ಕಡತಗಳನ್ನು ಇಟ್ಟು ಸೇಸಪ್ಪ ಬೆದ್ರಕಾಡು ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಆದರೆ ವಿಶ್ವನಾಥರು ಅಣ್ಣು ನಾಯ್ಕರು ದಿನಕ್ಕೊಂದು ಸಂಘಟನೆಯ ಹಿಂದೆ, ಜಾತಿ ಸಂಘಟನೆಯೊಂದಿಗೆ ಹೋಗುತ್ತಿದ್ದಾರೆ ಎಂದು ತಪ್ಪು ಮಾಹಿತಿ ನೀಡಿ ಸಂಘಟನೆಗಳ ಮಧ್ಯೆ ತಕರಾರು ಎಬ್ಬಿಸುವ ಕೆಲಸ ಮಾಡಿರುವುದು ಖಂಡನೀಯವಾಗಿದ್ದು, ಜಾಗದ ಹೆಸರಿನಲ್ಲಿ ಎಲ್ಲರಿಂದ ಹಣ ಪಡೆಯುವ ದಂಧೆಗೆ ನಮ್ಮ ವಿರೋಧವಿದೆ ಎಂದು ಹೇಳಿದರು.
ಆದ್ದರಿಂದ ವಿಶ್ವನಾಥ ಅವರು ನ್ಯಾಯ ಕೊಡಲು ಸಾಧ್ಯವಿದ್ದರೆ ನ್ಯಾಯಕೊಡಿಸಿ. ಅದನ್ನು ಬಿಟ್ಟು ನಮ್ಮ ಸಂಘಟನೆ ಬಗ್ಗೆ ಮಾತನಾಡಿದಲ್ಲಿ ಸ್ಪಷ್ಟ ಉತ್ತರ ಕೊಡಲು ನಮ್ಮ ಕಾರ್ಯಕರ್ತರು ಸದಾ ಸಿದ್ಧರಾಗಿದ್ದೇವೆ. ಇನ್ನು ಮುಂದೆ ವಿಶ್ವನಾಥರು ಮುಂದುವರಿದು ಮಾತನಾಡಿದರೆ ನಾವು ಕೂಡಾ ಅವರ ಪದಗಳನ್ನು ಬಳಕೆ ಮಾಡಲು ಹಿಂಜರಿಯುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆ ಮುಖಂಡರಾದ ಬಿ.ಕೆ. ಅಣ್ಣಪ್ಪ, ಕೃಷ್ಣಪ್ಪ ಬಜಕ್ಕಳ, ಧನಂಜಯ ಬಲ್ನಾಡು, ಕರಿಯಪ್ಪ ಕೆ.ಎಸ್. ಉಪಸ್ಥಿತರಿದ್ದರು.