ಮಂಗಳೂರು: ಸತ್ಯ, ಧರ್ಮ, ನಿಷ್ಠೆಯಲ್ಲಿ ನಡೆಯುವ ಒಕ್ಕಲಿಗ ಸಮುದಾಯ ರಾಜಪರಂಪರೆಯ ಹಿನ್ನಲೆಯ ಸಮುದಾಯವಾಗಿದ್ದು ಕೇವಲ ಕೃಷಿಕರಾಗಿ ಮಾತ್ರ ಗುರುತಿಸಿಕೊಂಡಿಲ್ಲ. ಬದಲಾಗಿ ಶೈಕ್ಷಣಿಕ, ವೈದ್ಯಕೀಯ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿಯೂ ಬಹಳಷ್ಟು ಕೊಡುಗೆ ನೀಡಿದೆ ಎಂದು ಬಾಲಕೃಷ್ಣ ಡಿ.ಬಿ. ತಿಳಿಸಿದ್ದಾರೆ.
ಅವರು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಒಕ್ಕಲಿಗ ಸಮುದಾಯ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು, ಕೆದಂಬಾಡಿ ರಾಮಯ್ಯ ಗೌಡ, ಗುಡ್ಡೆಮನೆ ಅಪ್ಪಯ್ಯ ಗೌಡ, ಬೆಂಗಳೂರು ನಿರ್ಮಾತೃ ನಾಡ ಪ್ರಭು ಕೆಂಪೇಗೌಡ, ದೇಶಕ್ಕೆ ಪ್ರಧಾನಿ, ರಾಜ್ಯದ ಮೊದಲನೇ, ಎರಡನೇ ಮುಖ್ಯಮಂತ್ರಿ ಹಾಗೂ ಈವರೆಗೆ ಏಳು ಮುಖ್ಯಮಂತ್ರಿಗಳನ್ನು ಕೊಟ್ಟ ಸಮುದಾಯವಾಗಿದೆ. ಕರ್ನಾಟಕ ವಿಧಾನ ಸೌಧ ಕಟ್ಟಿಸಿದ, ಮೊದಲ ರಾಷ್ಟ್ರ ಕವಿಯನ್ನು ನೀಡಿದ ಸಮುದಾಯ ಅಂದರೆ ಅದು ಒಕ್ಕಲಿಗ ಸಮುದಾಯ. ಒಕ್ಕಲಿಗ ಸಮುದಾಯ ಅಂತ ರಾಷ್ಟ್ರೀಯ ಮಟ್ಟದಲ್ಲೂ ಪ್ರಭಾವ ಇರುವ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠವನ್ನು ಹೊಂದಿದೆ. ಇತರ ಸಮುದಾಯವರೊಂದಿಗೆ ಅನ್ನೋನ್ಯತೆಯಿಂದ ನಡೆದುಕೊಂಡು ಎಲ್ಲ ಸಮುದಾಯವನ್ನು ಅಪ್ಪಿಕೊಂಡು ಒಪ್ಪಿಕೊಂಡು ಬಂದಿರುವಂತಹ ಸಮುದಾಯ ಆಗಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಈ ಹಿಂದಿನಿಂದಲೂ ಒಕ್ಕಲಿಗ ಸಂಘಗಳು ಬಲಿಷ್ಠವಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡು ಸಮಾಜಮುಖಿ ಕೆಲಸ ಕಾರ್ಯಗಳನ್ನು ನಡೆಸುತ್ತಾ ಬಂದಿದೆ. ಹಾಗಾಗಿ ಜಿಲ್ಲೆಯಾದ್ಯಂತ ಬೇರೆ ಬೇರೆ ಸಮುದಾಯ ಸಂಘಟನೆಗಳಿದ್ದರೂ, ಒಕ್ಕಲಿಗ ಸಮುದಾಯವನ್ನು ಇನ್ನಷ್ಟು ಪ್ರಬಲಗೊಳಿಸುವ ನಿಟ್ಟಿನಲ್ಲಿ ಉದಯನ್ನೋಖವಾಗಿ ದಕ್ಷಿಣ ಕನ್ನಡ ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘ ಮಂಗಳೂರು ಸಂಘವನ್ನು ಸ್ಥಾಪಿಸಲಾಗಿದೆ. ಈ ಸಂಘದಲ್ಲಿ ಪ್ರತಿ ತಾಲೂಕಿನಲ್ಲಿ ಆಯ್ಕೆಗೊಂಡವರು ನಿರ್ದೇಶಕರಾಗಿರುತ್ತಾರೆ. ಶೈಕ್ಷಣಿಕ, ವೈದ್ಯಕೀಯ, ರಾಜಕೀಯ, ಆರ್ಥಿಕತೆ ಮತ್ತು ಸಾಮಾಜಿಕವಾಗಿ ನಮ್ಮ ಸಮುದಾಯವರನ್ನು ಸದೃಡಗೊಳಿಸಿ ರಾಜ್ಯದ ಮತ್ತು ದೇಶದ ಅಭಿವೃದ್ಧಿಗೆ ತೊಡಗಿಸಿಕೊಳ್ಳುವುದು ನಮ್ಮ ಸಂಘದ ಧೈಯ ಉದ್ದೇಶವಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಭಾಸ್ಕರ ಗೌಡ ದೇವಸ್ಯ, ಪ್ರಧಾನ ಕಾರ್ಯದರ್ಶಿ ಡಾ,ಎನ್.ಎ.ಜ್ಞಾನೇಶ್, ಜಂಟಿ ಕಾರ್ಯದರ್ಶಿ ದಾಮೋದರ್ ಗೌಡ, ಕೋಶಾಧಿಕಾರಿ ಕೆ.ವಿಶ್ವನಾಥ ಗೌಡ, ಜಂಟಿ ಕೋಶಾಧಿಕಾರಿ ಸೂರಜ್ ಕುಮಾರ್ ಯು., ಪುತ್ತೂರು ಗೌಡ ಸಂಘದ ಅಮರನಾಥ ಗೌಡ, ಗೌರಿ ಬನ್ನೂರು. ರಕ್ಷಿತ್ ಪುತ್ತಿಲ, ಯಶವಂತ ಕಳುವಾಜೆ. ಕೆ. ವಿಜಯ ಗೌಡ, ಸೌಮ್ಯಲತಾ ಉಪಸ್ಥಿತರಿದ್ದರು.