ಪುತ್ತೂರು: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದ ಜನತೆ ನೆಮ್ಮದಿಯಿಂದ ಇದ್ದಾರೆ. ಸರಕಾರದ ಐದು ಗ್ಯಾರಂಟಿ ಯೋಜನೆಗಳು ಪ್ರತೀ ಮನೆಯನ್ನು ಬೆಳಗಿಸಿದೆ ಮತ್ತು ಪ್ರತೀ ಕುಟುಂಬಕ್ಕೂ ತಲುಪಿದೆ. ಶಕ್ತಿ ಯೋಜನೆಯಿಂದ ಕಾಂಗ್ರೆಸ್ ಎಲ್ಲರಿಗೂ ಶಕ್ತಿ ನೀಡಿದ್ದು ನಾವೆಲ್ಲರೂ ಸೇರಿ ಕಾಂಗ್ರೆಸ್ ಗೆ ಶಕ್ತಿ ನೀಡುವ ಕೆಲಸವನ್ನು ಮಾಡಬೇಕು ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಫೆ.17 ರಂದು ಮಂಗಳೂರಿನಲ್ಲಿ ನಡೆಯುವ ಕಾಂಗ್ರೆಸ್ ಸಮಾವೇಶದ ಕುರಿತು ಉದಯಗಿರಿ ಭಾಗೀರಥಿ ಸಭಾಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಫೆ. 17 ರಂದು ನಡೆಯುವ ರಾಜ್ಯಮಟ್ಟದ ಸಮಾವೇಶದಲ್ಲಿ ಎಲ್ಲರೂ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಜನತೆ ಕಾಂಗ್ರೆಸ್ ಗೆ ಶಕ್ತಿ ತುಂಬುವ ಕೆಲಸ ಮಾಡಿದರೆ ಸರಕಾರ ಕೂಡಾ ಜನತೆಗೆ ಶಕ್ತಿ ನೀಡುವ ಕೆಲಸವನ್ನು ಖಂಡಿತವಾಗಿಯೂ ಮಾಡುತ್ತದೆ ಎಂದು ಹೇಳಿದರು.
ಪುತ್ತೂರು ಬ್ಲಾಕ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ. ರಾಜಾರಾಂ ಕೆ.ಬಿ., ಕೆಪಿಸಿಸಿ ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿದರು.
ವೇದಿಕೆಯಲ್ಲಿ ಸೇವಾದಳದ ಜಿಲ್ಲಾಧ್ಯಕ್ಷ ಜೋಕಿಂ ಡಿಸೋಜಾ, ಕೆಪಿಸಿಸಿ ಸದಸ್ಯ ಪ್ರಸಾದ್ ಕೌಶಲ್ ಶೆಟ್ಟಿ ಮತ್ತು ಯಂಗ್ ಬ್ರಿಗೇಡ್ ರಾಜ್ಯಾಧ್ಯಕ್ಷ ಜುನೈದ್ ಉಪಸ್ಥಿತರಿದ್ದರು. ಕೆಪಿಸಿಸಿ ವಕ್ತಾರ ಅಮಲ ರಾಮಚಂದ್ರ ಕಾರ್ಯಕ್ರಮ ನಿರೂಪಿಸಿದರು.
40 ಬಸ್ ವ್ಯವಸ್ಥೆ:
ಕಾರ್ಯಕ್ರಮಕ್ಕೆ ಒಟ್ಟು 40 ಬಸ್ ವ್ಯವಸ್ಥೆ ಇದ್ದು ಬೈಪಾಸ್ ಬಳಿ ಇರುವ ರೈ ಎಸ್ಟೇಟ್ ಕಚೇರಿಯಿಂದ ಬಸ್ಸು ಹೊರಡಲಿದೆ. ಎಲ್ಲಾ ಗ್ರಾಮಗಳಿಂದ ಬರುವ ಬಸ್ಸುಗಳು ಮತ್ತು ಕಾರ್ಯಕರ್ತರ ಖಾಸಗಿ ವಾಹನಗಳು ಸೇರಿ ಒಟ್ಟಾಗಿ ಪುತ್ತೂರಿನಿಂದ ಹೊರಡಲಿದೆ. ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ.