ಸುಳ್ಯ: ಸರಕಾರಿ ಕಚೇರಿಯಿಂದ ಕಚೇರಿಗೆ ಅಲೆಯುವ ಕೆಲಸ ಪ್ರಸ್ತುತ ದಿನಗಳಲ್ಲಿ ಕಷ್ಟಸಾಧ್ಯವಾಗುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಒಂದೇ ವೇದಿಕೆಯಲ್ಲಿ ಎಲ್ಲಾ ಅಧಿಕಾರಿಗಳು ಗ್ರಾಮದ ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ ಮುನ್ನುಡಿ ಬರೆದಿರುವುದು ಶ್ಲಾಘನೀಯ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.

ಅವರು ಶನಿವಾರ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಜಂಟಿ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಕೊಲ್ಲಮೊಗ್ರದಲ್ಲಿ ನಡೆದ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಳೆದ ಬಾರಿ ನೆರೆ ಬಂದು ಇಲ್ಲಿನ ಜನರು ತುಂಬಾ ತೊಂದರೆಗೊಳಗಾಗಿದ್ದರು. ಈ ನೈಜ್ಯ ಸಮಸ್ಯೆಗಳನ್ನು ಅಧಿಕಾರಿಗಳು ಅರಿತು ಪರಿಹಾರ ಒದಗಿಸಬೇಕು. ಈ ಮೂಲಕ ಜನಸ್ನೇಹಿ ಕೆಲಸಗಳು ನಡೆಯಬೇಕು ಎಂದು ಅವರು ಹೇಳಿದರು.
ದ.ಕ. ಜಿಲ್ಲಾಧಿಕಾರಿ ಮುನ್ನೈ ಮುಗಿಲನ್ ಮಾತನಾಡಿ, ಈ ಭಾಗದ ಜನತೆಯ ಕಷ್ಟಗಳು ಅರಿವಾಗಿದೆ. ಇಲ್ಲಿ ಬಂದಿರುವ ಅರ್ಜಿಗಳಲ್ಲಿ ಶೇ.70 ರಷ್ಟು ಅರ್ಜಿಗಳು ಜಾಗದ ವಿಷಯಕ್ಕೆ ಸಂಬಂಧಿಸಿದ್ದು. ಭಾಗಶಃ ಅರಣ್ಯ ಪ್ರದೇಶ ಹೆಚ್ಚಿರುವುದರಿಂದ ಇದನ್ನು ಆದ್ಯತೆಯ ನೆಲೆಯಲ್ಲಿ ತೆಗೆದುಕೊಂಡು ಗಡಿ ಗುರುತು ಮಾಡಲಾಗುವುದು. ಈ ಕೆಲಸಕ್ಕೆ 4- 5 ತಿಂಗಳು ಅವಧಿ ಬೇಕಾಗಬಹುದು ಎಂದ ಅವರು,

ಕೋವಿ ಲೈಸೆನ್ಸ್ ವರ್ಗಾವಣೆ ಹಿಂದೆ ಇತ್ತು. ಈಗ ಅದಕ್ಕೆ ಅವಕಾಶ ಇಲ್ಲ. ಆದರೆ ಮನೆಯ ಹಿರಿಯರು ತನ್ನ ಹೆಸರಿನ ಲೈಸೆನ್ಸ್ ನ್ನು ನಮಗೆ ಶರಣು ಮಾಡಬೇಕು. ಬಳಿಕ ಅವರ ಮಗನಿಗೆ ಹೊಸ ಲೈಸೆನ್ಸ್ ನೀಡಲು ಅವಕಾಶ ಇದೆ ಎಂದು ಡಿ.ಸಿ. ಯವರು ಹೇಳಿದರು.
ಅಡಿಕೆ ಎಲೆ ಹಳದಿ ರೋಗಕ್ಕೆ ಪರಿಹಾರ ಇಲ್ಲ. ಅದರಿಂದ ಹೊರಗೆ ಬರಬೇಕು. ಪರ್ಯಾಯ ಬೆಳೆ ಬೆಳೆಯಲು ಆದ್ಯತೆ ನೀಡಬೇಕು. ಇದಕ್ಕೆ ಇಲಾಖೆಗಳಿಂದ ಸಹಕಾರ ಪಡೆಯಲು ಅವಕಾಶ ಇದೆ. ಕೃಷಿಕರು ಇದರ ಪ್ರಯೋಜನ ಪಡೆಯಿರಿ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಕಡಮಕಲ್ಲು – ಮಡಿಕೇರಿ ರಸ್ತೆ, ಗ್ರಾಮ ಲೆಕ್ಕಾಧಿಕಾರಿ, ಗ್ರಾಮಕ್ಕೆ ಬಸ್ ಇತ್ಯಾದಿ ಬೇಡಿಕೆಗಳಿಗೂ ಅವರು ಪರಿಹಾರದ ಭರವಸೆ ನೀಡಿದರು.

ಪೋಲೀಸ್ ವರಿಷ್ಠಾಧಿಕಾರಿ ರಿಶ್ಯಂತ್ ಸಿ.ಬಿ., ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮಹಾಪಾತ್ರ, ಡಿ. ಎಫ್. ಒ. ಅಂಥೋನಿ ಮರಿಯಪ್ಪ, ಸುಳ್ಯ ತಾ.ಪಂ. ಇ.ಒ. ರಾಜಣ್ಣ, ತಹಶೀಲ್ದಾರ್ ಮಂಜುನಾಥ್ ಜಿ, ಹರಿಹರ – ಕೊಲ್ಲಮೊಗ್ರ ಸಹಕಾರ ಸಂಘದ ಅಧ್ಯಕ್ಷ ಬಿ. ಎಸ್. ಹರ್ಷ ಕುಮಾರ್, ಹರಿಹರ ಗ್ರಾ.ಪಂ. ಅಧ್ಯಕ್ಷ ವಿಜಯ ಅಂಜಣ, ಕೊಲ್ಲಮೊಗ್ರ ಗ್ರಾ.ಪಂ. ಅಧ್ಯಕ್ಷೆ ಜಯಶ್ರೀ, ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಮಹಾರಾಷ್ಟ್ರ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ, ಪ್ರಧಾನ ಕಾರ್ಯದರ್ಶಿ ರಾಜೇಶ್, ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಂಗ್ಲೆಗುಡ್ಡೆ ಶಾಲಾವಿದ್ಯಾರ್ಥಿಗಳು ಪ್ರಾರ್ಥಿಸಿದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತರಾದ ಬಾಲಕೃಷ್ಣ ಭೀಮಗುಳಿ, ಲೋಕೇಶ್ ಪೆರ್ಲಂಪಾಡಿ ಕಾರ್ಯಕ್ರಮ ನಿರೂಪಿಸಿದರು.