ರಾಮಕುಂಜ: ಶ್ರೀರಾಮಕುಂಜೇಶ್ವರ ದೇವಸ್ಥಾನದ ಪರಿವಾರ ದೈವಗಳ ಮುಕ್ಕಾಲ್ದಿ (ಪೂಜಾರಿ) ಮೋಂಟ ಗೌಡ ಆನ (80) ಅಲ್ಪಕಾಲದ ವಯೋಸಹಜ ಕಾಯಿಲೆಯಿಂದ ಶುಕ್ರವಾರ ಮುಂಜಾನೆ ನಿಧನರಾಗಿದ್ದಾರೆ.
ಆನ ಮನೆತನ ಶ್ರೀ ರಾಮಕುಂಜೇಶ್ವರ ದೇವಾಲಯದ ಜಾತ್ರೆ- ಉತ್ಸವ- ರಥ ಅಲಂಕಾರ -ದೈವಗಳ ಚಾಕರಿ ಹೀಗೆ ಹತ್ತು ಹಲವು ಕಾರ್ಯಗಳಲ್ಲಿ ನೇಮ ನಿಷ್ಠೆಗಳಿಂದ ಸೇವಾ ಕಾರ್ಯಗಳಲ್ಲಿ ಹಲವು ತಲೆಮಾರುಗಳಿಂದ ತೊಡಗಿಸಿಕೊಂಡು ಆದರ್ಶತೆ ಮೆರೆದ ಕುಟುಂಬ. ಕೆಲವು ವರ್ಷಗಳ ಹಿಂದಿನವರೆಗೂ ರಥ ಅಲಂಕರಿಸಲು ಬಿದಿರುಬೆತ್ತಗಳನ್ನು ಸಂಗ್ರಹಿಸಿ ರಥ ಸಿದ್ದಗೊಳಿಸುವುದೆಂದರೆ ಬಲು ಕಠಿಣವಾದ ಕೆಲಸವಾಗಿತ್ತು. ಅಂತಹ ಕೌಶಲ್ಯ ಮೆರೆದ ಈ ಕುಟುಂಬದ ಯುವ ತಲೆಮಾರು ಸಹಿತ ಹಿರಿಯರಂತೆಯೇ ಸೇವಾ ಭಾವದಿಂದ ತೊಡಗಿರುವುದು ಎಲ್ಲರಿಗೂ ಮಾದರಿ. ಆನ ಮನೆತನದ ಸಹೋದರರ ಪೈಕಿ ಮೋಂಟ ಗೌಡರು ಸುಮಾರು 60 ವರ್ಷಗಳಿಗೂ ಮಿಕ್ಕಿ ದೇವರ ಹಾಗೂ ದೈವಗಳ ಚಾಕರಿಯಲ್ಲಿ ತೊಡಗಿಸಿಕೊಂಡವರು. ತನ್ನ ಹಿರಿಯರ ಜೊತೆ ಬಾಲ್ಯದಲ್ಲಿಯೇ ಸಹಾಯಕರಾಗಿ ಜೊತೆಗೂಡಿ ಅತ್ಯಂತ ಭಯ -ಭಕ್ತಿಯಿಂದ ಇತ್ತೀಚೆಗಿನವರೆಗೂ ಸೇವೆಯಲ್ಲಿ ತೊಡಗಿದ್ದರು. ಒಂದೆರಡು ವರ್ಷಗಳಿಂದ ವಯಸ್ಸಿನ ಸಹಜ ನಿಶ್ಯಕ್ತಿಯಿಂದಾಗಿ ಸಕ್ರಿಯರಾಗಿರಲಿಲ್ಲ. ತನ್ನ ಮಕ್ಕಳಿಗೆ ದೈವ- ದೇವರಲ್ಲಿ ಪ್ರಾರ್ಥಿಸಿ, ತಾನು ಆಶೀರ್ವದಿಸಿ ತನ್ನಂತೆ ಚಾಕರಿಯಲ್ಲಿ ತೊಡಗುವ ತಲೆತಲಾಂತರದ ಭಕ್ತಿ ಭಾವ ಮೆರೆದು ಪ್ರಾಚೀನರ ಆದರ್ಶತೆಯ ಕೊಂಡಿಯಾದವರು.
ಊರ ದೇವಾಲಯದ ಉತ್ಸವಗಳೆಂದರೆ ತಮ್ಮ ಕರ್ತವ್ಯವೆಂದು ಭಾವಿಸಿ ಮುಂದೆ ಬಂದು ಆಡಳಿತದೊಂದಿಗೆ ಸೇವೆ ಸಲ್ಲಿಸುವ ಗುಣ ಸಂಪನ್ನತೆಯ ಸಂಸ್ಕಾರವಂತ ಕುಟುಂಬ ಇವರದು. ಇವರ ಮನೆತನದಲ್ಲಿ ಸರಕಾರಿ ಉದ್ಯೋಗಸ್ಥರು ಸಹಿತ ಇಂದಿಗೂ ದೇವರ ಸೇವೆಯಲ್ಲಿ ತೊಡಗಿರುವುದು ಸೌಹಾರ್ದತೆ – ಸಹಬಾಳ್ವೆಯ ಪ್ರತೀಕವೆನಿಸಿದೆ. 2012ರಲ್ಲಿ ದೇವಾಲಯದ ಅಷ್ಟ ಬಂಧ -ಬ್ರಹ್ಮಕಲಶ ಮಹೋತ್ಸವದಲ್ಲಿ ದೀರ್ಘಾವಧಿಯ ಸೇವೆಗಾಗಿ ಸಾರ್ವಜನಿಕ ಸನ್ಮಾನವಿತ್ತು ಗೌರವಿಸಿರುವುದನ್ನು ಹಾಗೂ ಹಲವು ಮನೆತನಗಳ ದೈವಾರಾಧನೆಗಳಲ್ಲಿ ಸನ್ಮಾನ ಪಡೆದಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಮೃತರು ಪತ್ನಿ ಶಿವಮ್ಮ, ಮಕ್ಕಳಾದ ಗಿರಿಯಪ್ಪ, ಚಂದ್ರಶೇಖರ, ಚಂದ್ರಾವತಿ, ಸೊಸೆಯಂದಿರು ಮೊಮ್ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.