ಪುತ್ತೂರು: ಕೆಡ್ಡಸವನ್ನು ಕೇವಲ ಹೆಸರಿಗಾಗಿ ಮಾತ್ರ ಆಚರಣೆ ಮಾಡಬಾರದು. ಬದಲಾಗಿ ಕಾಯಾ-ವಾಚಾ-ಮನಸಾ ಆಚರಣೆಯಲ್ಲಿ ಒಳಗೊಂಡಿರಬೇಕು. ಆಗ ಪ್ರತೀ ಮನೆಯಲ್ಲಿ ಕೆಡ್ಡಸ ಆಚರಣೆ ಮಹತ್ವ ಪಡೆಯಲು ಸಾಧ್ಯ ಎಂದು ಸಂತ ಫಿಲೋಮಿನಾ ಕಾಲೇಜಿನ ಪ್ರಾಧ್ಯಾಪಕಿ ಉಷಾ ಅಭಿಪ್ರಾಯಪಟ್ಟರು.
ಅವರು ಶನಿವಾರ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀ ಸಭಾಂಗಣದಲ್ಲಿ ಒಕ್ಕಲಿಗ ಗೌಡ ಸೇವಾ ಮಹಿಳಾ ಘಟಕದ ಆಶ್ರಯದಲ್ಲಿ ನಡೆದ ಕೆಡ್ಡಸ ಆಚರಣೆ ಕುರಿತು ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದಲ್ಲಿ ಹೆಣ್ಣಿಗೆ ಹೇಗೆ ವಿಶೇಷ ಗೌರವ ನೀಡುತ್ತಾರೋ ಹಾಗೇ ಹೆಣ್ಣು ಸಮಾನಳಾದ ಭೂಮಿತಾಯಿಗೂ ಅದಕ್ಕಿಂತ ಹೆಚ್ಚಿನ ಮಹತ್ವ ನೀಡಬೇಕು. ಈ ನಿಟ್ಟಿನಲ್ಲಿ ಕೆಡ್ಡಸ ಆಚರಣೆಯ ಮೂರು ದಿನಗಳಲ್ಲಿ ಭೂಮಿ ಊಳುವುದು, ಬೆಂಕಿ ಹಾಕುವುದನ್ನು ಮಾಡಬಾರದು ಎಂದ ಅವರು, ಸಾಂಪ್ರಾದಾಯಿಕವಾಗಿ ಕೆಡ್ಡಸ ಆಚರಣೆಯನ್ನು ಮನೆಯ ಮಕ್ಕಳ ಉಪಸ್ಥಿತಿಯಲ್ಲಿ ಮಾಡುವ ಮೂಲಕ ಮುಂದಿನ ಪೀಳಿಗೆಗೂ ಆಚರಣೆಯ ಮಹತ್ವವನ್ನು ತಿಳಿಸಬೇಕಾದ ಅಗತ್ಯವಿದೆ ಎಂದರು.
ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಶಿಕ್ಷಕಿ ರೇವತಿ ಮಾತನಾಡಿ, ಪ್ರಸ್ತುತ ಕೆಡ್ಡಸ ವಾಟ್ಸಪ್ ಸ್ಟೇಟಸ್ ಗೆ ಸೀಮಿತವಾಗಿದ್ದು, ಶುಭಾಶಯ ಹಂಚಿಕೆಗೂ ಬಳಸಲಾಗುತ್ತಿದೆ. ಇದನ್ನು ಬಿಟ್ಟು ಪ್ರತಿಯೊಂದು ಹಬ್ಬದ ಆಚರಣೆಯ ಕುರಿತು, ಕೆಡ್ಡಸದಂದು ಭೂಮಿಯನ್ನು ಯಾವ ರೀತಿ ಆರಾಧಿಸಬೇಕು ಎಂಬುದನ್ನು ಮನೆಯ ಮಕ್ಕಳಿಗೆ ತಿಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಕೆಡ್ಡಸ ಆಚರಣೆ ಕುರಿತು ಪ್ರಾತ್ಯಕ್ಷಿತೆ ನೀಡಲಾಯಿತು.
ವೇದಿಕೆಯಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ವಾರಿಜಾ, ಉಪಕಾರ್ಯದರ್ಶಿ ರತ್ನಾ ಕಿಶೋರ್, ಮಾಜಿ ಅಧ್ಯಕ್ಷೆ ಮೀನಾಕ್ಷಿ ಗೌಡ, ಪ್ರಧಾನ ಕಾರ್ಯದರ್ಶಿ ಸಂಧ್ಯಾ ಶಶಿಧರ್, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಮಹಿಳಾ ಘಟಕದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.