ಪುತ್ತೂರು : ನೂತನವಾಗಿ ಅಸ್ತಿತ್ವಕ್ಕೆ ಬಂದ ‘ಪುತ್ತೂರು ಐಟಿ ಡೀಲರ್ಸ್ ಅಸೋಸಿಯೇಶನ್’ ಉದ್ಘಾಟನಾ ಸಮಾರಂಭ ಫೆ.10 ಶನಿವಾರ ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಎದುರಿನ ಸಚ್ಚಿದಾನಂದ ಸಭಾಭವನದಲ್ಲಿ ನಡೆಯಲಿದೆ ಎಂದು ಅಸೋಸಿಯೇಶನ್ ಅಧ್ಯಕ್ಷ ಅನೂಪ್ ಕೆ.ಜೆ. ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈಗಾಗಲೇ ಅಸೋಸಿಯೇಶನ್‍ಗೆ ಪದಾಧಿಕಾರಿಗಳ ನೇಮಕ ಮಾಡಲಾಗಿದ್ದು, ಪುತ್ತೂರು, ಬಂಟ್ವಾಳ, ಸುಳ್ಯ, ಕಡಬ ಹಾಗೂ ವಿಟ್ಲ ತಾಲೂಕುಗಳಲ್ಲಿರುವ ಐಟಿ ಕ್ಷೇತ್ರದವರು ಕೈ ಜೋಡಿಸುತ್ತಿದ್ದಾರೆ. ಈಗಾಗಲೇ ಅಸೋಸಿಯೇಶನ್ ನಲ್ಲಿ 75 ಮಂದಿ ಸದಸ್ಯರಿದ್ದು, ಪುತ್ತೂರಿನಲ್ಲಿ 33 ಮಂದಿ ಇದ್ದಾರೆ. ಮುಂದೆ ಪರವಾನಿಗೆ ಹಾಗೂ ಜಿಎಸ್ ಟಿ ರಿಜಿಸ್ಟರ್ಡ್ ಹೊಂದಿರುವ ಸದಸ್ಯರನ್ನು ಮತ್ತಷ್ಟು ಸಂಖ್ಯೆಯಲ್ಲಿ ಸೇರ್ಪಡೆಗೊಳಿಸಲಾಗುವುದು ಎಂದು ತಿಳಿಸಿದರು.
ಕಂಪ್ಯೂಟರ್ ಮಾರಾಟ ಹಾಗೂ ಸೇವೆಯಲ್ಲಿ ಸದಸ್ಯರಿಗೆ ಗುರುತಿಸಿಕೊಳ್ಳಲು ಸಮಸ್ಯೆ ಉಂಟಾದಲ್ಲಿ ಎಲ್ಲರಿಗೂ ಸಹಾಯ ಮಾಡುವ ಉದ್ದೇಶದಿಂದ ಅಸೋಸಿಯೇಶನ್ ಮಾಡಲಾಗಿದ್ದು, ಕಂಪ್ಯೂಟರ್ ಗೆ ಸಂಬಂಧ ಪಟ್ಟ ಐಟಂಗಳನ್ನು ಖರೀದಿ ಮಾಡಿ ಆನ್‍ಲೈನ್ ದರದಲ್ಲಿ ಗ್ರಾಹಕರಿಗೆ ನೀಡುವ ಇರಾದೆಯನ್ನು ಸಂಸ್ಥೆ ಹೊಂದಿದೆ. ಮುಂದಿನ ದಿನಗಳಲ್ಲಿ ಆನ್‍ಲೈನ್ ಮಾರಾಟ ಸೇವೆಯ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು. ಅಲ್ಲದೆ ಅಸೋಸಿಯೇಶನ್ ಮೂಲಕ ಸಾಮಾಜಿಕ ಸೇವೆಯನ್ನು ಮಾಡಲಿದ್ದೇವೆ ಎಂದು ತಿಳಿಸಿದರು.
ಫೆ.10 ಭಾನುವಾರ ಸಂಜೆ 7 ಗಂಟೆಗೆ ಐಟಿ ಡೀಲರ್ಸ್ ಅಸೋಸಿಯೇಶನ್ ನ್ನು ಪುತ್ತೂರು ಚೇಂಬರ್ಸ್ ಆಫ್ ಕಾಮರ್ಸ್ ನ ಅಧ್ಯಕ್ಷ ವಾಮನ್ ಪೈ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಜೆಸಿಐ ರಾಷ್ಟ್ರೀಯ ತರಬೇತುದಾರ ಕೃಷ್ಣ ಮೋಹನ್ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಸೋಸಿಯೇಶನ್ ನ ಕಿಶೋರ್ ಕುಮಾರ್, ಶಿವಪ್ರಕಾಶ್, ಸುದರ್ಶನ್ ಉಪಸ್ಥಿತರಿದ್ದರು.