ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಮೂರು ವರ್ಷಗಳ ಅವಧಿ ಮುಗಿದಿದ್ದು, ಮುಳಿಯ ಕೇಶವ ಪ್ರಸಾದ್ ಅಧ್ಯಕ್ಷತೆ ಅವಧಿ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ತಾಪಂ ಕಾರ್ಯನಿರ್ವಹಣಾ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಅವರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಪುತ್ತೂರು ತಾಪಂ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಕಳೆದ 5 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ನವೀನ್ ಭಂಡಾರಿ ಬ್ರಹ್ಮಾವರ ತಾಪಂ ಇ.ಒ. ಆಗಿ ವರ್ಗವಾಗಿದ್ದಾರೆ. ಇದೀಗ ಅವರು ಪುತ್ತೂರು ದೇವಳದ ಆಡಳಿತಾಧಿಕಾರಿಯಾಗಿಯೂ ಅಧಿಕಾರ ವಹಿಸಿಕೊಂಡಿದ್ದಾರೆ.
ಈ ಮೊದಲು ಇವರು ದೇವಳದ ಕಾರ್ಯನಿರ್ವಹಣಾ ಅಧಿಕಾರಿ ಕೆಲಸ ಮಾಡಿದ್ದರು. ಬಳಿಕ ದೇವಳಕ್ಕೆ ಶ್ರೀನಿವಾಸ್ ಅವರನ್ನು ಪೂರ್ಣ ಪ್ರಮಾಣದ ಕಾರ್ಯನಿರ್ವಹಣಾ ಅಧಿಕಾರಿಯಾಗಿ ನೇಮಿಸಲಾಗಿತ್ತು.
ನವೀನ್ ಕುಮಾರ್ ಭಂಡಾರಿ ಬ್ರಹ್ಮಾವರ ತಾಪಂ ಕಾ.ನಿ. ಅಧಿಕಾರಿಯಾಗಿ ವರ್ಗವಾಗಿದ್ದು, ಬ್ರಹ್ಮಾವರ ತಾಪಂ ಕಾ.ನಿ. ಅಧಿಕಾರಿ ಹನುಮಂತಪ್ಪ ವೆಂಕಟಪ್ಪ ಇಬ್ರಾಹಿಂಪುರ್ ಅವರು ಪುತ್ತೂರಿಗೆ ವರ್ಗಾವಣೆಯಾಗಿದ್ದಾರೆ. ಅವರು ಇನ್ನೂ ಪುತ್ತೂರಿನಲ್ಲಿ ಅಧಿಕಾರ ವಹಿಸಿಕೊಳ್ಳದಿರುವ ಹಿನ್ನೆಲೆಯಲ್ಲಿ ದೇವಳದ ಆಡಳಿತಾಧಿಕಾರಿ ಹುದ್ದೆಯ ಕರ್ತವ್ಯವನ್ನು ತಾತ್ಕಾಲಿಕ ನೆಲೆಯಲ್ಲಿ ನವೀನ್ ಭಂಡಾರಿ ವಹಿಸಿದ್ದಾರೆ. ಒಂದೆರಡು ದಿನಗಳಲ್ಲಿ ಈ ಹುದ್ದೆ ಹನುಮಂತಪ್ಪ ವೆಂಕಟಪ್ಪ ಇಬ್ರಾಹಿಂಪುರ್ ಅವರಿಗೆ ಸಿಗಲಿದೆ.