ಪುತ್ತೂರು : ಕೆವೈಸಿ ಅಪ್ಡೇಟ್ ಇದೆ ಎಂದು ವ್ಯಕ್ತಿಯೊಬ್ಬರಿಂದ ಬ್ಯಾಂಕ್ ಸಿಬ್ಬಂದಿ ಎಂದು ಹೇಳಿಕೊಂಡು ಒಟಿಪಿ ಪಡೆದು ಖಾತೆಯಿಂದ ಲಕ್ಷಾಂತರ ರೂ. ವಂಚಿಸಿದ ಘಟನೆ ಕುರಿತು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಂದ್ರಶೇಖರ ಭಟ್ (62) ಒಟಿಪಿ ನೀಡಿ ಲಕ್ಷಾಂತರ ರೂಪಾಯಿ ಕಳೆದುಕೊಂಡವರು.
ಮಂಗಳವಾರ ಚಂದ್ರಶೇಖರ ಭಟ್ ಅವರ ಮೊಬೈಲಿಗೆ ಕೆವೈಸಿ ಅಪ್ ಡೇಟ್ ಮಾಡುವ ಕುರಿತು ಸಂದೇಶ ಬಂದಿದೆ. ಸಂದೇಶದಲ್ಲಿ ತಿಳಿಸಿದ ದೂರವಾಣಿ ಸಂಖ್ಯೆಗೆ ಅವರು ಕರೆ ಮಾಡಿದಾಗ ನಿಮ್ಮ ಖಾತೆ ಬ್ಲಾಕ್ ಆಗಿದೆ. ಒಟಿಪಿ ನೀಡುವಂತೆ ತಿಳಿಸಿದ ಮೇರೆಗೆ ಭಟ್ ಅವರು ಒಟಿಪಿ ನೀಡಿದ್ದಾರೆ. ಒಟಿಪಿ ನೀಡಿದ ಸ್ವಲ್ಪ ಹೊತ್ತಿನಲ್ಲೇ ಅವರ ಬ್ಯಾಂಕ್ ಖಾತೆಯಿಂದ 1.73 ಲಕ್ಷ ರೂಪಾಯಿ ಹಣ ಕಟ್ ಆಗಿದೆ.
ಈ ಬಗ್ಗೆ ಬ್ಯಾಂಕ್ ಸಿಬ್ಬಂದಿಯೆಂದು ನಂಬಿಸಿ ವಂಚಿಸಿದ ಅಪರಿಚಿತ ವ್ಯಕ್ತಿಯ ವಿರುದ್ಧ ಪುತ್ತೂರು ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.