ಪುತ್ತೂರು: ನಾನೇ ಶ್ರೇಷ್ಠ, ನನ್ನ ಧರ್ಮ ಮಾತ್ರ ಶ್ರೇಷ್ಠ ಉಳಿದವು ಶೂನ್ಯ ಎಂಬ ಭಾವನೆ ನಮ್ಮಲ್ಲಿ ಇರಬಾರದು, ಎಲ್ಲಾ ಧರ್ಮಗಳು ಒಳಿತನ್ನೇ ಕಲಿಸಿಸುತ್ತದೆ, ಧರ್ಮಗಳ ಬಗ್ಗೆ ಪರಸ್ಪರ ಅರಿತುಕೊಂಡಲ್ಲಿ ಸಮಾಜದಲ್ಲಿ ಸೌಹಾರ್ಧತೆಯನ್ನು ಕಾಣಲು ಸಾಧ್ಯವಾಗುತ್ತದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಅವರು ಪುರುಷರಕಟ್ಟೆ ಮದ್ರಸ ವಠಾರದಲ್ಲಿ ನಡೆಯುತ್ತಿರುವ ಧಾರ್ಮಿಕ ಮತಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಕ್ಕಳಿಗೆ ಸಣ್ಣ ಪ್ರಾಯದಲ್ಲೇ ನಮ್ಮ ಧರ್ಮದ ಆಚಾರ ವಿಚಾರಗಳನ್ನು ಕಲಿಸಬೇಕು. ತನ್ನ ಧರ್ಮವನ್ನು ಅರಿತುಕೊಳ್ಳುವುದರ ಜೊತೆಗೆ ಸಹೋದರ ಧರ್ಮದ ಬಗ್ಗೆ ಅರಿವು ಮೂಡಿಸಿಕೊಂಡಲ್ಲಿ ಪರಸ್ಪರ ಜ್ಞಾನ ವೃದ್ದಿಯಾಗುತ್ತದೆ. ಧರ್ಮದ ಬಗ್ಗೆ ತಿಳುವಳಿಕೆಯ ಕೊರತೆಯಿಂದಲೇ ಇಂದು ಸಮಾಜದಲ್ಲಿ ಧರ್ಮ ದಂಗಲ್‌ಗಳು ನಡೆಯುತ್ತದೆ ಎಂದು ಹೇಳಿದರು.
ರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಎಲ್ಲರನ್ನೂ ಪ್ರೀತಿಸುವುದೇ ಹಿಂದುತ್ವವಾಗಿದೆ. ಅನ್ಯ ಧರ್ಮದವರನ್ನು ದ್ವೇಷಿಸುವುದು ಹಿಂದುತ್ವ ಎಂದು ನಂಬಿಕೊಂಡ ಅಲ್ಪಜ್ಞಾನಿಗಳು ನಮ್ಮೊಳಗಿದ್ದಾರೆ. ಪರಸ್ಪರ ಸಹೋದರ ಭಾನವೆಯಿದ್ದಲ್ಲಿ ಮಾತ್ರ ನಾವು ಮನುಷ್ಯರಾಗಲು ಸಾಧ್ಯವಾಗುತ್ತದೆ. ಮಾನವೀಯ ಧರ್ಮವೇ ಶ್ರೇಷ್ಟ ಎಂಬ ಭಾವನೆ ನಮ್ಮಲ್ಲಿ ಮೂಡಿದಾಗ ಸಹೋದರತ್ವ ಮೂಡುತ್ತದೆ ಅದು ಇಲ್ಲದವರು ಮನುಷ್ಯರಾಗಲು ಸಾಧ್ಯವಿಲ್ಲ ಎಂದು ಹೇಳಿದರು.
ವೇದಿಕೆಯಲ್ಲಿ ಧಾರ್ಮಿಕ ಮುಖಂಡರುಗಳು ಉಪಸ್ಥಿತರಿದ್ದರು.