ಸುಳ್ಯ: ಉಬರಡ್ಕ ಮಿತ್ತೂರು ಗ್ರಾಮದ ಉಳ್ಳಾಕುಲು ದೈವಸ್ಥಾನ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಂಡರೂ ಕಾಮಗಾರಿ ನಡೆಸಿಲ್ಲವೆಂದು ಆರೋಪಿಸಿರುವ ಗ್ರಾಮಸ್ಥರು, ಲೋಕೋಪಯೋಗಿ ಇಲಾಖೆಯ ಮುಂದೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಕಳೆದ ಮಾರ್ಚ್ ನಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದಾದ್ಯಂತ ವಿವಿಧ ಕಾಮಗಾರಿಗಳಿಗೆ 1 ಸಾವಿರ ಲಕ್ಷ ರೂ. ಬಿಡುಗಡೆಗೊಂಡಿತ್ತು. ಇದರಲ್ಲಿ ಉಬರಡ್ಕ – ಮಿತ್ತೂರು – ಉಳ್ಳಾಕುಲು ದೈವಸ್ಥಾನ ರಸ್ತೆಯ ಅಭಿವೃದ್ಧಿಗಾಗಿ 30 ಲಕ್ಷ ರೂ. ಮೀಸಲಿಡಲಾಗಿತ್ತು.
ಇದೀಗ ವಿವಿಧ ಕಡೆಗಳಲ್ಲಿ ಕಾಮಗಾರಿ ನಡೆಸಲಾಗಿದೆ. ಆದರೆ ಉಬರಡ್ಕ – ಮಿತ್ತೂರು – ಉಳ್ಳಾಕುಲು ದೈವಸ್ಥಾನ ರಸ್ತೆಯ ಕಾಮಗಾರಿ ಮಾತ್ರ ಇನ್ನೂ ಆರಂಭಗೊಂಡಿಲ್ಲ. ಆದ್ದರಿಂದ ಕಾಮಗಾರಿಯನ್ನು ತಕ್ಷಣ ಆರಂಭಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಒಂದು ವಾರದ ಒಳಗೆ ಕಾಮಗಾರಿ ಆರಂಭಿಸದೇ ಇದ್ದರೆ, ಸುಳ್ಯ ಲೋಕೋಪಯೋಗಿ ಇಲಾಖೆಯ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಹರೀಶ್ ರೈ ಉಬರಡ್ಕ ತಿಳಿಸಿದ್ದಾರೆ.