ಮಂಗಳೂರು: ಗುರುಪುರ ಸಮೀಪದ ಮಳಲಿ ಮಸೀದಿಯೊಳಗಡೆ ಮಂದಿರದ ಅವಶೇಷ ಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ಹೈಕೋರ್ಟ್ ನಡೆಸಿದ ವಿಚಾರಣೆ ಪೂರ್ಣಗೊಂಡಿದೆ ಎಂದು ತಿಳಿದುಬಂದಿದೆ.
ಮಳಲಿಯ ಅಸಯ್ಯದ್ ಅಬ್ದುಲ್ಲಾಹಿಲ್ ಮದನಿ ಮಸೀದಿಯಲ್ಲಿ ಮಂದಿರದ ಅವಶೇಷ ಪತ್ತೆಯಾದ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ನಡೆಸಿದ ಅಷ್ಟಮಂಗಲ ಪ್ರಶ್ನೆಯಲ್ಲಿ, ಹಿಂದೆ ಅಲ್ಲಿ ಮಠ ಇತ್ತು ಎಂದು ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ನ್ಯಾಯಾಲಯದ ಕದ ತಟ್ಟಿತ್ತು.
ಹೈಕೋರ್ಟ್ ಮೆಟ್ಟಿಲೇರಿದ ಮಸೀದಿ:
ಅರ್ಜಿಯ ವಿಚಾರಣೆ ನಡೆಸಿದ ಮಂಗಳೂರಿನ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ತೀರ್ಪು ನೀಡಿತ್ತು. ಆದರೆ ಪ್ರಕರಣದ ವಿಚಾರಣೆ ನಡೆಸಲು ಅಧೀನ ನ್ಯಾಯಾಲಯಕ್ಕಿರುವ ಅಧಿಕಾರವನ್ನು ಪ್ರಶ್ನಿಸಿ ಮಸೀದಿ ಪರ ವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್ ವಿಚಾರಣೆ ಪೂರ್ಣಗೊಳಿಸಿದ್ದು, ಆದೇಶ ಕಾಯ್ದಿರಿಸಿದೆ ಎಂದು ತಿಳಿದುಬಂದಿದೆ.
ತೀರ್ಪಿನ ನಂತರದ ಸಾಧ್ಯತೆಗಳು:
ಹೈಕೋರ್ಟ್ ತೀರ್ಪಿಗೆ ಎದುರು ನೋಡಲಾಗುತ್ತಿದೆ. ಒಂದು ವೇಳೆ ಮಂಗಳೂರು ಸಿವಿಲ್ ನ್ಯಾಯಾಲಯಕ್ಕೆ ವಿಚಾರಣೆ ನಡೆಸಲು ಅವಕಾಶ ಇದೆ ಎಂದು ತೀರ್ಪು ನೀಡಿದರೆ ವಿಚಾರಣೆ ಮಂಗಳೂರಿನಲ್ಲೇ ಮುಂದುವರಿಯಲಿದೆ. ಇಲ್ಲವಾದರೆ, ಹೈಕೋರ್ಟ್ ತೀರ್ಪಿನ ವಿರುದ್ಧ ಮೈಸೂರಿನ ಟ್ರಿಬ್ಯುನಲ್ ನಲ್ಲಿ ಕೇಸು ದಾಖಲಿಸುವ ಸಾಧ್ಯತೆ ಇದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.