ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಮೂಡುಬಿದರೆ, ಮಂಗಳೂರು, ಮಂ. ಉತ್ತರ, ಮಂ. ದಕ್ಷಿಣ, ಬಂಟ್ವಾಳ, ಸುಳ್ಯ ಮಂಡಲಗಳಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಅಧ್ಯಕ್ಷರನ್ನು ನೇಮಿಸಿದ್ದಾರೆ. ಆದರೆ ಪುತ್ತೂರು ಮಂಡಲದ ಹೆಸರೇ ಪಟ್ಟಿಯಲ್ಲಿಲ್ಲ!!
ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರಿನ ಹೆಸರು ರಾಜ್ಯ ರಾಜಕಾರಣದಲ್ಲಿ ಬಹಳ ದೊಡ್ಡದಾಗಿ ಸುದ್ದಿಯಾಗಿತ್ತು. ಅದಕ್ಕೆ ಕಾರಣ ಅರುಣ್ ಕುಮಾರ್ ಪುತ್ತಿಲ ಅವರ ಸ್ಪರ್ಧೆ. ಅರುಣ್ ಕುಮಾರ್ ಪುತ್ತಿಲ ಅವರ ಸ್ಪರ್ಧೆ ಹೊಸ ರಾಜಕೀಯ ಶಕೆಗೂ ಕಾರಣವಾಯಿತು. ನಂತರದ ಬೆಳವಣಿಗೆಯಲ್ಲಿ ಪುತ್ತಿಲ ಅವರು ಬಿಜೆಪಿ ಸೇರ್ಪಡೆಗೊಳ್ಳುತ್ತಾರೆ ಎನ್ನುವ ಮಾತುಕತೆ ಕೇಳಿಬರುತ್ತಿದೆ. ಆದರೆ ಇದರ ಬಗ್ಗೆ ಎಲ್ಲಿಯೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇದೀಗ ಈ ಮಾತುಕತೆಗೆ ಪೂರಕ ಎಂಬಂತೆ ಪುತ್ತೂರು ಮಂಡಲವನ್ನು ಹೊರತುಪಡಿಸಿ ಉಳಿದೆಲ್ಲಾ ಮಂಡಳಗಳಿಗೆ ಬಿಜೆಪಿ ಅಧ್ಯಕ್ಷರನ್ನು ನೇಮಕಗೊಳಿಸಿದೆ.
ಇದರರ್ಥವೇನು?
ಅರುಣ್ ಕುಮಾರ್ ಪುತ್ತಿಲ ಹಾಗೂ ಬಿಜೆಪಿ ನಡುವಿನ ಒಡಂಬಡಿಕೆ ಅಥವಾ ಮಾತುಕತೆ ಇನ್ನೂ ಅಂತಿಮ ಹಂತಕ್ಕೆ ತಲುಪಿಲ್ಲ ಎಂದು ಅರ್ಥವಿಸಿಕೊಳ್ಳಬಹುದೇ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ. ಅಥವಾ ಮಾತುಕತೆ ಅಂತಿಮಗೊಂಡು ನಿರ್ಣಯವನ್ನಷ್ಟೇ ಇನ್ನೂ ಹೊರಗೆಡವಿಲ್ಲ ಎಂದೂ ಅರ್ಥವಿಸಿಕೊಳ್ಳಬಹುದು. ಒಟ್ಟಿನಲ್ಲಿ ರಾಜಕೀಯ ದಾಳ ಉರುಳಿಸಲು ಬಿಜೆಪಿ ಸಿದ್ಧವಾಗಿದೆ. ಆದರೆ ಅದು ಹೇಗೆ ಎನ್ನುವುದು ಮಾತ್ರ ಇನ್ನೂ ಸಸ್ಪೆನ್ಸ್.
ಯಾರ್ಯಾರು ಅಧ್ಯಕ್ಷರು?
ಬೆಳ್ತಂಗಡಿ ಮಂಡಲಕ್ಕೆ ಶ್ರೀನಿವಾಸ್ ರಾವ್, ಮೂಡುಬಿದರೆಗೆ ದಿನೇಶ್ ಪುತ್ರನ್, ಮಂಗಳೂರು ನಗರ ಉತ್ತರಕ್ಕೆ ರಾಜೇಶ್ ಕೊಟ್ಟಾರಿ, ಮಂಗಳೂರು ನಗರ ದಕ್ಷಿಣಕ್ಕಡ ರಮೇಶ್ ಕಂಡೆಟ್ಟು, ಮಂಗಳೂರಿಗೆ ಜಗದೀಶ್ ಆಳ್ವ ಕುವೆತ್ತಬೈಲ್, ಬಂಟ್ವಾಳಕ್ಕೆ ಚೆನ್ನಪ್ಪ ಕೋಟ್ಯಾನ್, ಸುಳ್ಯಕ್ಕೆ ವೆಂಕಟ ವಳಲಂಬೆ ಅವರನ್ನು ನೇಮಕಗೊಳಿಸಿದೆ.
ಮೋರ್ಚಾ ಅಧ್ಯಕ್ಷರ ನೇಮಕ ಎಸ್.ಟಿ. ಮೋರ್ಚಾದ ಜಿಲ್ಲಾ ಅಧ್ಯಕ್ಷರಾಗಿ, ಪುತ್ತೂರು ತಾಲೂಕು ಪಂಚಾಯತ್ ಸದಸ್ಯರಾಗಿದ್ದ ಹರೀಶ್ ಬಿಜತ್ರೆ ಅವರನ್ನು ನೇಮಕಗೊಳಿಸಲಾಗಿದೆ. ಉಳಿದಂತೆ ಮಹಿಳಾ ಮೋರ್ವಚಾದ ಜಿಲ್ಲಾ ಅಧ್ಯಕ್ಷರಾಗಿ ಮಂಜುಳಾ ರಾವ್, ಯುವ ಮೋರ್ಚಾ ಅಧ್ಯಕ್ಷರಾಗಿ ನಂದನ್ ಮಲ್ಯ, ಎಸ್ಸಿ ಮೋರ್ಚಾಕ್ಕೆ ಜಗನ್ನಾಥ್ ಬೆಳ್ವಾಯಿ, ರೈತ ಮೋರ್ಚಾಕ್ಕೆ ಗಣೇಶ್ ಗೌಡ ನಾವುರ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.