ಇಸ್ಲಾಮಾಬಾದ್: ದೇಶದ ಗೌಪ್ಯತೆ ಸೋರಿಕೆ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಮಂಗಳವಾರ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಸರ್ಕಾರಿ ಮಾಧ್ಯಮ ಮತ್ತು ಅವರ ಪಕ್ಷದ ವಕ್ತಾರರು ತಿಳಿಸಿದ್ದಾರೆ.
ದೇಶದ ಗೌಪ್ಯತೆ ಸೋರಿಕೆಗೆ ಸಂಬಂಧಿಸಿದ ಸೈಫರ್ ಪ್ರಕರಣದಲ್ಲಿ ಪಾಕಿಸ್ತಾನ ತೆಹ್ರಿಕ್ – ಇ – ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಮತ್ತು ಉಪಾಧ್ಯಕ್ಷ (ಶಾ ಮಹಮೂದ್) ಖುರೇಷಿ ಅವರಿಗೆ ತಲಾ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಪಕ್ಷದ ವಕ್ತಾರರು ಎಎಫ್‌ಪಿಗೆ ತಿಳಿಸಿದ್ದಾರೆ.
ಸಾರ್ವತ್ರಿಕ ಚುನಾವಣೆ ಹೊಸ್ತಿಲಲ್ಲಿ ಇರುವ ಪಾಕಿಸ್ತಾನದಲ್ಲಿ ಪಿಟಿಐ ಪಕ್ಷದ ದಿಗ್ಗಜ ನಾಯಕರು ಜೈಲು ಸೇರುವಂತಾಗಿದ್ದು, ರಾಜಕೀಯವಾಗಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.
ಇಮ್ರಾನ್ ಖಾನ್ ಅವರು ಪ್ರಧಾನಿ ಆಗಿದ್ದ ವೇಳೆ ಅಮೆರಿಕ ಸರ್ಕಾರದ ವಿದೇಶಾಂಗ ಇಲಾಖೆ ಹಾಗೂ ಪಾಕಿಸ್ತಾನದ ರಾಯಭಾರಿ ನಡುವೆ ನಡೆದಿದ್ದ ಮಾತುಕತೆಯ ವಿವರಗಳನ್ನು ಬಹಿರಂಗವಾಗಿ ದೇಶದ ಜನತೆ ಮುಂದೆ ಕಾರ್ಯಕ್ರಮವೊಂದರಲ್ಲಿ ವಿವರಿಸಿದ್ದರು. ಸಾಮಾನ್ಯವಾಗಿ ಒಂದು ದೇಶ ಮತ್ತೊಂದು ದೇಶದ ಜೊತೆ ಅಧಿಕೃತ ವಿದೇಶಾಂಗ ವ್ಯವಹಾರದ ಮಾತುಕತೆ, ರಾಯಭಾರಿ ಮಟ್ಟದ ಸಂವಹನಗಳು ನಡೆದಾಗ ಅವು ಗುಪ್ತ ಲಿಪಿಯಲ್ಲಿ ಇರುತ್ತವೆ. ಅದನ್ನು ಸಾಮಾನ್ಯ ಭಾಷೆಗೆ ಪರಿವರ್ತಿಸಿ ಬಹಿರಂಗಗೊಳಿಸುವಂತಿಲ್ಲ. ಆದರೆ, ಇಮ್ರಾನ್ ಖಾನ್ ಈ ದಾಖಲೆಯನ್ನು ಬಹಿರಂಗ ಮಾಡುವ ಮೂಲಕ ಸರ್ಕಾರಿ ರಹಸ್ಯ ದಾಖಲೆ ಕಾಯ್ದೆ ಉಲ್ಲಂಘನೆ ಮಾಡಿದ್ಧಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಕೆ ಮಾಡಲಾಗಿತ್ತು. ಇದರ ಆಧಾರದ ಮೇಲೆ ಇದೀಗ ನ್ಯಾಯಾಲಯ ಇಮ್ರಾನ್ ಖಾನ್‌ಗೆ 10 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.