ಪುತ್ತೂರು: ಪುತ್ತೂರಿನ ಕಬಕ ಗ್ರಾಮದ ಪೆರಿಯತ್ತೋಡಿ ಎಂಬಲ್ಲಿ ನಿರ್ಮಾಣವಾಗಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನಕ್ಕೆ ಜಾಗದ ದಾಖಲೆಗಳ ಹಸ್ತಾಂತರ ಕಾರ್ಯಕ್ರಮ ಪುತ್ತೂರು ಆಡಳಿತ ಸೌಧದ ಸಹಾಯಕ ಆಯುಕ್ತರ ನ್ಯಾಯಾಲಯ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಪುತ್ತೂರಿನ ಹಿಂದಿನ ಶಾಸಕರಾಗಿದ್ದ ಸಂಜೀವ ಮಠಂದೂರು ಅವರ ಪ್ರಯತ್ನದಿಂದ ಮಂಜೂರುಗೊಂಡು ಸರಕಾರದಿಂದ ಅನುಮೋದನೆ ಪಡೆದಿದ್ದ ಯೋಜನೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಪುತ್ತೂರು ಸಹಾಯಕ ಆಯುಕ್ತರಾದ ಜುಬಿನ್ ಮಹಾಪಾತ್ರ ಹಾಗೂ ಶಾಸಕ ಅಶೋಕ್ ಕುಮಾರ್ ರೈ ಅವರು ಜಮೀನಿನ ದಾಖಲೆ ಪತ್ರಗಳನ್ನು ಕರ್ನಾಟಕ ಕ್ರಿಕೆಟ್ ಅಸೋಶಿಯೇಷನ್ ಅಧ್ಯಕ್ಷ ರಘುರಾಮ್ ಭಟ್ ಅವರಿಗೆ ಹಸ್ತಾಂತರ ಮಾಡಿದರು.
ಕಬಕ ಗ್ರಾಮದ ಪೆರಿಯತ್ತೋಡಿ ಎಂಬಲ್ಲಿ 23.25 ಎಕರೆ ಪ್ರದೇಶದಲ್ಲಿ ಪುತ್ತೂರು ಉಪವಿಭಾಗದ ಮೊತ್ತಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಮುಂದಿನ 3 ವರ್ಷಗಳ ಅವಧಿಯಲ್ಲಿ ನಿರ್ಮಾಣವಾಗಲಿದೆ. ಸುಮಾರು 25 ಕೋಟಿ ವೆಚ್ಚದಲ್ಲಿ ಈ ಮೈದಾನ ಪುತ್ತೂರಿನ ಹೆಮ್ಮೆಯ ಗರಿಯಾಗಲಿದೆ. ಇದು ಪುತ್ತೂರಿನ ಅಭಿವೃದ್ಧಿಯ ಮೈಲಿಗಲ್ಲು ಆಗಲಿದೆ.
ಕಬಕ ಗ್ರಾಮದ ಸರ್ವೆ ನಂ.260/1ಪಿನಲ್ಲಿ 23.25 ಎಕ್ರೆ ಜಮೀನನ್ನು ಕ್ರಿಕೆಟ್ ಕ್ರೀಡಾಂಗಣಕ್ಕೆಂದು ಕಾದಿರಿಸಲಾಗಿತ್ತು. ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಪುತ್ತೂರಿನ ಹಿಂದಿನ ಶಾಸಕರಾಗಿದ್ದ ಸಂಜೀವ ಮಠಂದೂರು ಅವರ ಪ್ರಸ್ತಾವನೆಯಂತೆ ಕ್ರೀಡಾಂಗಣ ನಿರ್ಮಾಣಕ್ಕೆ ಅನುಮೋದನೆ ನೀಡುವ ಕುರಿತು ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣ ಗೌಡರು ಪ್ರಸ್ತಾಪಿಸಿದ್ದರು. ಈ ಕುರಿತು ಚರ್ಚೆ ನಡೆದು ಪುತ್ತೂರು ತಾಲೂಕಿನ ಕಬಕ ಗ್ರಾಮ ಮತ್ತು ಬಳ್ಳಾರಿಯಲ್ಲಿ ಹೊಸದಾಗಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿತ್ತು.
ಪುತ್ತೂರಿನಲ್ಲಿ ಹೊಸ ತಾಲೂಕು ಕ್ರೀಡಾಂಗಣಕ್ಕೆ ತೆಂಕಿಲದಲ್ಲಿ ಜಾಗಕ್ಕಾಗಿ ಸರ್ವೇ ಕಾರ್ಯಗಳು ನಡೆದಿತ್ತು. ಇದರ ಜತೆಗೆ ಕಬಕದಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಹಿಂದಿನ ಬಿಜೆಪಿ ಸರಕಾರ ಅನುಮೋದನೆ ನೀಡಿತ್ತು. ಪುತ್ತೂರಿನ ಸರ್ವ ಅಭಿವೃದ್ಧಿ ನಿಟ್ಟಿನಲ್ಲಿ ಈ ಎಲ್ಲಾ ಕಾರ್ಯಗಳು ನಡೆದಿತ್ತು.
ಕ್ರೀಡಾಂಗಣ ಮಂಜೂರಾತಿಗಾಗಿ ಆಗಿನ ಶಾಸಕಿ ಶಕುಂತಳಾ ಶೆಟ್ಟಿಯವರ ಮೂಲಕ ಪ್ರಸಾದ್ ಕೌಶಲ್ ಶೆಟ್ಟಿ ರಾಜಕೀಯ ಒತ್ತಡ ತಂದಿದ್ದರು. ಆದರೆ ಸಫಲವಾಗದ್ದರಿಂದ ಕೈಬಿಟ್ಟಿದ್ದರು. ಬಳಿಕ ಶಾಸಕರಾಗಿ ಬಂದಿದ್ದ ಸಂಜೀವ ಮಠಂದೂರು ಅವರ ಮೂಲಕ ಸಚಿವ ಸುನಿಲ್ ಕುಮಾರ್ ಅವರಿಗೆ ಒತ್ತಡ ತರಲಾಗಿತ್ತು. ಸಂಜೀವ ಮಠಂದೂರು ಅವರು ಮುತುವರ್ಜಿ ವಹಿಸಿ ಸಂಪುಟದಲ್ಲಿ ಅನುಮೋದನೆ ಪಡೆಯಲು ಪ್ರಯತ್ನಿಸಿದ್ದರು. ಪರಿಣಾಮ ಪುತ್ತೂರಿನ ಜನತೆಯ ಎಂಟು ವರ್ಷಗಳ ಬೇಡಿಕೆ ಕೊನೆಗೂ ಈಡೇರಿತ್ತು.