ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಹವ್ಯಾಸಿ ಖಗೋಳ ವೀಕ್ಷಕರ ಸಂಘ ಹಾಗೂ ಕೆದಂಬಾಡಿಯ ಗ್ರಾಮ ಪಂಚಾಯಿತಿ ಜಂಟಿ ಆಶ್ರಯದಲ್ಲಿ ‘ಚಂದ್ರಾನ್ವೇಷಣೆ’ ಖಗೋಳ ವೀಕ್ಷಣೆ ಕಾರ್ಯಕ್ರಮ ತಿಂಗಳಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಕಾಲೇಜಿನ ದತ್ತು ಗ್ರಾಮವಾದ ಕೆದಂಬಾಡಿಯ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಆಸಕ್ತ ಸಾರ್ವಜನಿಕರಿಗಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪೂರ್ಣಚಂದ್ರನ ರೂಪವನ್ನು ಅತ್ಯಾಧುನಿಕ ದೂರದರ್ಶಕದ ಮೂಲಕ ವೀಕ್ಷಿಸಲಾಯಿತು.
ಕಾಲೇಜಿನ ವಿಶ್ರಾಂತ ಉಪ-ಪ್ರಾಂಶುಪಾಲ ಡಾ।ಎ. ಪಿ. ರಾಧಾಕೃಷ್ಣರವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಖಗೋಳ ವಿದ್ಯಮಾನಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಭೂಮಿ ಹಾಗೂ ಚಂದ್ರನ ಉಗಮ, ಚಂದ್ರಯಾನ ಕಾರ್ಯಕ್ರಮ, ದೈನಂದಿನ ಜೀವನದಲ್ಲಿ ಮಾನವ ನಿರ್ಮಿತ ಉಪಗ್ರಹಗಳ ಪಾತ್ರ ಮುಂತಾದ ವಿಷಯಗಳ ಕುರಿತು ವಿಸ್ತೃತ ಮಾಹಿತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲ ವಂ| ಡಾ| ಆ್ಯಂಟನಿ ಪ್ರಕಾಸ್ ಮೊಂತೆರೋ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಎನ್., ಪಿಡಿಒ ಅಜಿತ್ ಜಿ.ಕೆ., ಶಾಲಾಭಿವೃದ್ಧಿ ಸಮಿತಿ ಸದಸ್ಯರುಗಳು, ಕಾಲೇಜಿನ ಪ್ರಾಧ್ಯಾಪಕರುಗಳಾದ ಡಾ।ಚಂದ್ರಶೇಖರ್ ಕೆ., ವಿಪಿನ್ ನಾಯ್ಕ್, ಅಭಿಷೇಕ್ ಸುವರ್ಣ, ಸುಜಿತ್ ಎಸ್., ನವೀನ್ ಡಿ ಸೋಜಾ, ಪ್ರತಿಭಾ ಕೆ ಮುಂತಾದವರು ಉಪಸ್ಥಿತರಿದ್ದರು.