ಕೇರಳ ನ್ಯಾಯಾಲಯ 15 ಮಂದಿ ಪಿ.ಎಫ್.ಐ. ಕಾರ್ಯಕರ್ತರಿಗೆ ಗಲ್ಲು ಶಿಕ್ಷೆ ವಿಧಿಸಿದೆ. 15 ಮಂದಿ ಅಪರಾಧಿಗಳಿಗೆ ಒಟ್ಟಿಗೆ ಗಲ್ಲು ಶಿಕ್ಷೆ ವಿಧಿಸಿರುವುದು ಕೇರಳದ ಇತಿಹಾಸದಲ್ಲೇ ಇದೇ ಮೊದಲು ಎಂದು ಹೇಳಲಾಗಿದೆ.
ರಾಷ್ಟ್ರೀಯ ಸ್ವಯಂ ಸೇವಕ (ಆರ್ ಎಸ್ ಎಸ್) ಸಂಘದ ಕಾರ್ಯಕರ್ತ, ಬಿಜೆಪಿ ನಾಯಕ ರಂಜಿತ್ ಶ್ರೀನಿವಾಸನ್ ಹತ್ಯೆ ಪ್ರಕರಣದಲ್ಲಿ ಕೇರಳ ನ್ಯಾಯಾಲಯ ಈ ತೀರ್ಪು ನೀಡಿದೆ.
ಕೇರಳದ ಮಾವೇಲಿಕರ ಅಡಿಷನಲ್ ಸೆಷನ್ಸ್ ನ್ಯಾಯಾಲಯ ನ್ಯಾಯಧೀಶೆ ವಿಜಿ ಶ್ರೀದೇವಿ ತೀರ್ಪು ಪ್ರಕಟಿಸಿದ್ದಾರೆ.
2021ರ ಡಿಸೆಂಬರ್ 19ರಂದು ರಂಜಿತ್ ಶ್ರೀನಿವಾಸನ್ ಅವರು ವಾಸವಾಗಿದ್ದ ಆಲೆಪ್ಪಿಯ ಮನೆಗೆ ಪ್ರವೇಶಿಸಿದ ಪಿ.ಎಫ್.ಐ ಮತ್ತು ಎಸ್.ಡಿ.ಪಿ.ಐ. ಕಾರ್ಯಕರ್ತರು ಕುಟುಂಬ ಸದಸ್ಯರ ಎದುರೇ ರಂಜಿತ್ ಶ್ರೀನಿವಾಸ್ ಅವರನ್ನು ಕೊಚ್ಚಿ ಕೊಲೆ ಮಾಡಿದ್ದರು.
ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ರಂಜಿತ್ ಪತ್ನಿ ಹಾಗೂ ತಾಯಿ, ಆರೋಪಿಗೆ ಗರಿಷ್ಠ ಶಿಕ್ಷೆ ಸಿಕ್ಕಿದ್ದು ಸಮಾಧಾನ ತಂದಿದೆ ಎಂದಿದ್ದಾರೆ.
ಸ್ವತಂತ್ರ ಭಾರತದ ಇತಿಹಾಸದಲ್ಲಿ, ಇದು ಅತಿ ಹೆಚ್ಚು ದೋಷಿಗಳಿಗೆ ಗಲ್ಲು ಶಿಕ್ಷೆ ಹೊಂದಿರುವ ನಾಲ್ಕನೇ ಪ್ರಕರಣವಾಗಿದೆ. ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ 26 ಮಂದಿಗೆ, 2008ರ ಅಹಮದಾಬಾದ್ ಸ್ಫೋಟದಲ್ಲಿ 38 ಮಂದಿಗೆ ಮತ್ತು 2010ರ ಬಿಹಾರ ದಲಿತ ಹತ್ಯಾಕಾಂಡದಲ್ಲಿ 16 ಮಂದಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ನೀಡಲಾಗಿತ್ತು.