ಕಾಣಿಯೂರು: ಕುಂಬ್ಲಾಡಿ ಶ್ರೀ ಕುಕ್ಕೆನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಜ. 29ರಂದು ನಡೆಯಿತು.
ಜ. 23ರಂದು ಗೊನೆ ಮುಹೂರ್ತ ನಡೆದಿದ್ದು, ಜ. 28ರಂದು ಬೆಳಿಗ್ಗೆ ಅರುವಗುತ್ತು ಮನೆಯಿಂದ ದೇವರ ಆಭರಣ ತರಲಾಯಿತು. ನಂತರ ನಾಲ್ಕಂಬ ಕ್ಷೇತ್ರದಲ್ಲಿ ಪ್ರಾರ್ಥನೆ ನಡೆದು, ದೇವಳದಲ್ಲಿ ತೋರಣ ಮುಹೂರ್ತ ಜರಗಿತು. ಅಂಕದ ಕೂಟೇಲಿನಲ್ಲಿ ಪ್ರತಿಷ್ಠಾಪನಾ ನಿಮಿತ್ತ ಗಣಹೋಮ, ಪ್ರಾರ್ಥನೆ, ದೇವರ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಸಂಜೆ ತಂತ್ರಿ ಪರಿವಾರವನ್ನು ಸ್ವಾಗತಿಸಲಾಯಿತು. ರಾತ್ರಿ ಪ್ರಾಸಾದ ಶುದ್ಧಿ, ವಾಸ್ತು ರಾಕ್ಷೋಘ್ನ ಹೋಮ, ವಾಸ್ತು ಬಲಿ, ಮಹಾಪೂಜೆ, ಅನ್ನಸಂತರ್ಪಣೆ ನಡೆದು ನಾಣಿಲ ಹಿ.ಪ್ರಾ ಶಾಲೆ ಹಾಗೂ ಕೊಪ್ಪ ಕಿ.ಪ್ರಾ. ಶಾಲೆ, ಅಂಗನವಾಡಿ ಪುಟಾಣಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಕುಂಬ್ಲಾಡಿ ನೃತ್ಯ ನಿನಾದದಿಂದ ಭರತನಾಟ್ಯ ಜರಗಿತು.
ಜ. 29ರಂದು ಬೆಳಿಗ್ಗೆ ಗಣಪತಿ ಹೋಮ, ಬಿಂಬ ಶುದ್ಧಿ, ಕಲಶಪೂಜೆ, ಪ್ರಸಾದ ವಿತರಣೆ ನಡೆದು ದೇವರ ಕೆರೆಯಿಂದ ಪವಿತ್ರಜಲ ತರಲಾಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ಜರಗಿತು. ಸಂಜೆ ಆಶ್ಲೇಷ ಬಲಿ ನಡೆದು, ರಾತ್ರಿ ರಂಗಪೂಜೆ, ಶ್ರೀದೇವರ ಭೂತ ಬಲಿ, ನೃತ್ಯ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ನಾಲ್ಕಂಬ ಕ್ಷೇತ್ರದಲ್ಲಿ ಕಟ್ಟೆಪೂಜೆ, ಸಿಡಿಮದ್ದು ಪ್ರದರ್ಶನ, ಪ್ರಸಾದ ವಿತರಣೆ, ಸಂಪ್ರೋಕ್ಷಣೆ, ಮಂತ್ರಾಕ್ಷತೆ ನಡೆಯಿತು.
ಜ. 30ರಂದು ಸಂಜೆ ಉಳ್ಳಾಕ್ಲು ಭಂಡಾರ ತೆಗೆದು, ಧಾರ್ಮಿಕ ಸಭೆ, ಬಿತ್ತ್’ಲ್ದ ಉಳ್ಳಾಲ್ತಿ ಅಪ್ಪೆ ಭಗವತಿ ತುಳು ಪೌರಾಣಿಕ ನಾಟಕ ನಡೆಯಲಿದೆ. ಜ. 31ರಂದು ಬೆಳಿಗ್ಗೆ ಉಳ್ಳಾಕ್ಲು ನೇಮೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಉಳ್ಳಾಲ್ತಿ ಭಂಡಾರ ತೆಗೆದು ನಾಲ್ಕಂಭ ಕ್ಷೇತ್ರಕ್ಕೆ ಆಗಮನವಾಗಲಿದೆ. ರಾತ್ರಿ ಉಳ್ಳಾಲ್ತಿ ನೇಮೋತ್ಸವ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಲಿದೆ.