ಪುತ್ತೂರಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ | ದಾಖಲೆಗಳ ಹಸ್ತಾಂತರ

ಪುತ್ತೂರು: ಪುತ್ತೂರಿನ ಕಬಕ ಗ್ರಾಮದ ಪೆರಿಯತ್ತೋಡಿ ಎಂಬಲ್ಲಿ ನಿರ್ಮಾಣವಾಗಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನಕ್ಕೆ ಜಾಗದ ದಾಖಲೆಗಳ ಹಸ್ತಾಂತರ ಕಾರ್ಯಕ್ರಮ ಪುತ್ತೂರು ಆಡಳಿತ ಸೌಧದ ಸಹಾಯಕ ಆಯುಕ್ತರ ನ್ಯಾಯಾಲಯ ಸಭಾಂಗಣದಲ್ಲಿ ಮಂಗಳವಾರ ನಡೆಯಿತು. ಪುತ್ತೂರು ಸಹಾಯಕ ಆಯುಕ್ತರಾದ ಜುಬಿನ್ ಮೊಹಾಪಾತ್ರ ಹಾಗೂ ಶಾಸಕ ಅಶೋಕ್ ಕುಮಾರ್ ರೈ ಅವರು ದಾಖಲೆಗಳನ್ನು ಕರ್ನಾಟಕ ಕ್ರಿಕೆಟ್ ಅಸೋಶಿಯೇಷನ್ ಅಧ್ಯಕ್ಷ ರಘುರಾಮ್ ಭಟ್ ಅವರಿಗೆ ಹಸ್ತಾಂತರ ಮಾಡಿದರು.

ಕಬಕ ಗ್ರಾಮದ ಪೆರಿಯತ್ತೋಡಿ ಎಂಬಲ್ಲಿ 23.25 ಎಕರೆ ಪ್ರದೇಶದಲ್ಲಿ ಪುತ್ತೂರು ಉಪವಿಭಾಗದ ಮೊತ್ತಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಮುಂದಿನ 3 ವರ್ಷಗಳ ಅವಧಿಯಲ್ಲಿ ನಿರ್ಮಾಣವಾಗಲಿದೆ. ಸುಮಾರು 25 ಕೋಟಿ ವೆಚ್ಚದಲ್ಲಿ ಈ ಮೈದಾನ ಪುತ್ತೂರಿನ ಹೆಮ್ಮೆಯ ಗರಿಯಾಗಲಿದೆ. ಇದು ಪುತ್ತೂರಿನ ಅಭಿವೃದ್ಧಿಯ ಮೈಲಿಗಲ್ಲು ಆಗಲಿದೆ.

ಈ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ, ಪುತ್ತೂರಿನ ಸಮಗ್ರ ಅಭಿವೃದ್ಧಿಗೆ ಮುನ್ನುಡಿಯಾಗಿ ಕರ್ನಾಟಕ ಕ್ರಿಕೆಟ್ ಎಸೋಶಿಯೇಷನ್ ಬೆಂಗಳೂರು ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ನಿರ್ಮಾಣವಾಗಲಿದೆ. ಜಿಲ್ಲಾಧಿಕಾರಿ, ಪುತ್ತೂರು ಸಹಾಯಕ ಆಯುಕ್ತರು ಹಾಗೂ ಕಂದಾಯ ಇಲಾಖೆ ಸರ್ವೆ ನಡೆಸಿ ಪರಿಶೀಲನೆ ಮಾಡಿ ಇದೀಗ ಹಸ್ತಾಂತರ ಮಾಡಲಾಗುತ್ತಿದೆ. ಈ ಪ್ರಸ್ತಾವನೆ ಸರ್ಕಾರದಲ್ಲಿ ಬಾಕಿಯಾಗಿತ್ತು. ಇದೀಗ ಅದಕ್ಕೆ ಚಾಲನೆ ನೀಡಿದ್ದು 30 ವರ್ಷಗಳ ಅವಧಿಗೆ ಲೀಸ್ ಆಧಾರದಲ್ಲಿ ಜಾಗ ಹಸ್ತಾಂತರ ಮಾಡಲಾಗುತ್ತಿದೆ ಎಂದರು.































 
 

ಹಿಂದಿನ ಪ್ರಸ್ತಾವನೆಯಲ್ಲಿ ಕೇವಲ ಒಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಮಾತ್ರ ಇತ್ತು. ಈ ಹಿನ್ನಲೆಯಲ್ಲಿ ಪ್ರಾರಂಭದಲ್ಲಿ ನಾನು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದೆ. ಇದೀಗ ಪ್ರಮುಖವಾದ ಎರಡು ಶರತ್ತುಗಳೊಂದಿಗೆ ಈ ನಿರ್ಮಾಣ ನಡೆಯಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಜತೆಗೆ ಸ್ಥಳೀಯ ಯುವಕರಿಗೆ ಕ್ರಿಕೆಟ್ ಆಟವಾಡಲು ಮತ್ತೊಂದು ಮೈದಾನವೂ ನಿರ್ಮಾಣವಾಗಲಿದೆ. ಆದರೆ ಈ ಮೈದಾನದಲ್ಲಿ ಅಂಡರ್‌ಆರ್ಮ್ ಕ್ರಿಕೆಟ್ ಆಡಲು ಅವಕಾಶ ಇಲ್ಲ. ಓವರ್‌ಆರ್ಮ್‌ಗೆ ಮಾತ್ರ ಅವಕಾಶ ಇದೆ. ನಾನು ಅಂಡರ್‌ಆರ್ಮ್ ಕ್ರಿಕೆಟ್ ವಿರೋಧಿಯಲ್ಲ.  ಆದರೆ ಅಂಡರ್‌ಆರ್ಮ್ ಕ್ರಿಕೆಟ್‌ಗೆ ಸೀಮಿತ ಚೌಕಟ್ಟು ಇದೆ. ಕ್ರಿಕೆಟ್‌ನಲ್ಲಿ ಸಾಧನೆ ಮಾಡಬೇಕಾದರೆ ಓವರ್‌ಆರ್ಮ್ ಕ್ರಿಕೆಟ್ ಅನಿವಾರ್ಯ ಎಂದು ಅವರು ಹೇಳಿದರು.

ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಅವರು ಮಾತನಾಡಿ, ಪುತ್ತೂರಿಗೊಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದ ಕನಸು ಈ ಮೂಲಕ ನೆರವೇರುತ್ತಿದೆ. ಒಂದಷ್ಟು ಶರತ್ತುಗಳ ಜತೆಗೆ ಸ್ಥಳದ ಆರ್‌ಟಿಸಿ, ನಕ್ಷೆ, ಹಸ್ತಾಂತರ ಸರ್ಟಿಫಿಕೇಟ್ ಗಳನ್ನು ಹಸ್ತಾಂತರ ಮಾಡಲಾಗಿದೆ. ಪುತ್ತೂರು ಉಪವಿಭಾಗದ ಈ ಮೈದಾನದಿಂದ ಯುವಕ್ರಿಕೆಟ್ ಪ್ರತಿಭೆಗಳಿಗೆ ಪೂರಕ ವಾತಾವರಣ ನಿರ್ಮಾಣವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಕಾಂಗ್ರೇಸ್ ಮುಖಂಡರಾದ ಎಂ.ಬಿ.ವಿಶ್ವನಾಥ ರೈ, ಉಮಾನಾಥ ಶೆಟ್ಟಿ ಪೆರ್ನೆ, ಅಮಲ ರಾಮಚಂದ್ರ, ಕೃಷ್ಣಪ್ರಸಾದ್ ಆಳ್ವ, ಕೆಎಸ್‌ಸಿಎ ಮಂಗಳೂರು ವಲಯದ ರತನ್, ಯೂನಿಯನ್ ಕ್ರಿಕೆಟರ್‍ಸ್‌ನ ಕಾರ್ಯದರ್ಶಿ ವಿಶ್ವನಾಥ ನಾಯಕ್, ಉಪಾಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಕೋಶಾಧಿಕಾರಿ ಶ್ರೀಕಾಂತ್ ಕೊಳತ್ತಾಯ, ತರಬೇತಿದಾರ ಎಲಿಯಾಸ್ ಪಿಂಟೊ, ಸದಸ್ಯ ವಾಮನ ಪೈ, ಪ್ರತಾಪ್ ಉಪಸ್ಥಿತರಿದ್ದರು.

1 thought on “ಪುತ್ತೂರಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ | ದಾಖಲೆಗಳ ಹಸ್ತಾಂತರ”

  1. IT IS WONDER AND BLUNDER 25 ACRES FOR CRICKET STADIUM AVAILABLE IN PUTTUR BUT SINCE 15 YRS NO PLACE AVAILABLE FOR DISTRICT POLICE OFFICE WHICH NEED JUST 5 ACRE.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top