ಪುತ್ತೂರು: ಪುತ್ತೂರಿಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಭೇಟಿ ನೀಡಿದ ನಗರದ ಬಸ್ ನಿಲ್ದಾಣದ ಬಳಿ ಇರುವ ಗಾಂಧಿ ಕಟ್ಟೆಯಲ್ಲಿ ಮಂಗಳವಾರ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಯಿತು.
ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮಹಾಪಾತ್ರ ಗಾಂಧಿ ಪುತ್ತಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿ, ಪ್ರಸ್ತುತ ಗಾಂಧೀಜಿಯವರು ಇಲ್ಲದಿದ್ದರೂ ಅವರ ತತ್ವಗಳ ಮೂಲಕ ನಮ್ಮ ನಡುವೆ ಜೀವಂತ ಇದ್ದಾರೆ. ದೇಶದ ಸ್ವಾತಂತ್ರಕ್ಕೆ ಕಾರಣರಾದ ಗಾಂಧೀಜಿಯವರು ದೇಶದ ಆಡಳಿತಕ್ಕೆ ನಿಯಮಗಳನ್ನು ತಂದವರು. ದೇಶದ ಅಭಿವೃದ್ಧಿ, ಜನರ ಅಭಿವೃದ್ಧಿಗಾಗಿ ಪ್ರಜೆಗಳು ಕೆಲಸ ಮಾಡಬೇಕು ಎಂಬ ಸಂದೇಶ ನೀಡಿದವರು. ಗಾಂಧೀಜಿ ಜತೆಗೆ ನೇತಾಜಿ ಶುಭಾಶ್ಚಂದ್ರ ಭೋಸ್ ಸೇರಿದಂತೆ ಸಾವಿರಾರು ಮಂದಿಯ ದೇಶಪ್ರೇಮ, ತ್ಯಾಗ ಮಾಡಿದವರ ಆದರ್ಶದ ದಾರಿಯಲ್ಲಿ ನಾವು ನಡೆಯಬೇಕು ಎಂದರು.
ಗಾಂಧಿ ಕಟ್ಟೆ ಅಭಿವೃದ್ಧಿ ಸಮಿತಿ ಸಂಚಾಲಕ ಕೃಷ್ಣ ಪ್ರಸಾದ್ ಆಳ್ವ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, 1934 ರಲ್ಲಿ ಪುತ್ತೂರಿಗೆ ಗಾಂಧೀಜಿಯವರ ಭೇಟಿಯ ನೆನಪಿನ ಗಾಂಧಿ ಕಟ್ಟೆಯಲ್ಲಿ ನಿರಂತರ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಅವರಿಗೆ ಗೌರವ ಸೂಚಿಸಲಾಗುತ್ತಿದೆ ಎಂದರು.
ತಹಶೀಲ್ದಾರ್ ಜೆ. ಶಿವಶಂಕರ್, ನಗರ ಇನ್‍ಸ್ಪೆಕ್ಟರ್ ಸುನಿಲ್ ಕುಮಾರ್, ಗಾಂಧಿಕಟ್ಟೆ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ರಮೇಶ್ ಬಾಬು, ಕಾರ್ಯದರ್ಶಿ ಕಮಲ್ ಸಾಹೇಬ್, ಅಗ್ನಿಶಾಮಕ ಠಾಣೆಯ ಅಧಿಕಾರಿಗಳಾದ ರುಕ್ಮಯ ಗೌಡ, ಶಂಕರ್, ಪ್ರಕಾಶ್ ಪುರುಷರಕಟ್ಟೆ, ಸೀತಾರಾಮ ರೈ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗಾಂಧಿ ಕಟ್ಟೆಯ ಮುಂದುವರಿಕೆ ಅಭಿವೃದ್ಧಿ ಕೆಲಸಗಳಿಗೆ ವ್ಯವಸ್ಥೆ ಮಾಡುವಂತೆ ಕೃಷ್ಣ ಪ್ರಸಾದ್ ಆಳ್ವ ಅವರು ಸಹಾಯಕ ಕಮಿಷನರ್ ಅವರಿಗೆ ಮನವಿ ಮಾಡಿದರು. ಇದಕ್ಕೆ ಪೂರಕವಾಗಿ ಎಸಿ ಸ್ಪಂದಿಸಿದರು.
ಸೈರನ್ ಗೌರವ : ಅಗ್ನಿಶಾಮಾಕ ವಾಹನದಲ್ಲಿ 5 ನಿಮಿಷ ಸೈರಾನ್ ಮೊಳಗಿಸುವ ಮೂಲಕ ಗೌರವ ಸಲ್ಲಿಸಲಾಯಿತು.