ಪುತ್ತೂರು: ಮಧುಮೇಹ ಜಾಗೃತಿ ಉಪಕ್ರಮ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿರುವ ಪುತ್ತೂರಿನ ಹೆಸರಾಂತ ವೈದ್ಯ ಡಾ. ಸುರೇಶ್ ಪುತ್ತೂರಾಯ ಅವರಿಗೆ ಪುತ್ತೂರು ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಹಾಗೂ ನ್ಯೂಸ್ ಪುತ್ತೂರು ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಸುರೇಶ್ ಪುತ್ತೂರಾಯ, ಸಾಮೂಹಿಕ ಪ್ರಯತ್ನಕ್ಕೆ Diabetes Awareness Initiative Award-2024 ಒಲಿದು ಬಂದಿದೆ. ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಹಲವು ಸ್ವಯಂ ಸೇವಕರ ಶ್ರಮದಿಂದಾಗಿ ಈ ಶಿಬಿರ ಯಶಸ್ಸು ಕಂಡಿದೆ. ಪುತ್ತೂರಿನ ವೈದ್ಯರ ಜೊತೆಗೆ ಸುತ್ತಲಿನ ತಾಲೂಕುಗಳ ವೈದ್ಯರು ಶಿಬಿರಕ್ಕೆ ಆಗಮಿಸಿ ಸೇವೆ ನೀಡಿದ್ದಾರೆ. ಜನೌಷಧ ಕೇಂದ್ರವೂ ಶಿಬಿರದಲ್ಲಿ ಭಾಗವಹಿಸಿದೆ. ದೇವರ ಆಶೀರ್ವಾದದ ಜೊತೆಗೆ ಆರೋಗ್ಯದ ಆಶೀರ್ವಾದವೂ ಜನರಿಗೆ ದೊರೆಯಬೇಕು ಎನ್ನುವ ಉದ್ದೇಶ ಸಾರ್ಥಕ ಕಂಡಿದೆ ಎಂದರು.
ಇಂತಹ ಆರೋಗ್ಯದ ಶಿಬಿರಗಳು ಇನ್ನಷ್ಟು ವ್ಯಾಪಕವಾಗಿ ಆಗಬೇಕಾಗಿದೆ. ಸಾಮಾಜಿಕ ಕಾರ್ಯಕ್ರಮ ಮಾಡುವಲ್ಲಿ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಕೂಡ ತೊಡಗಿಸಿಕೊಂಡಿದ್ದು, ಆರೋಗ್ಯ ಕಾರ್ಯಕ್ರಮಗಳನ್ನು ನೀಡುವಂತಾಗಲಿ. ಇಂದು ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಬಹಳ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಸುತ್ತಿದ್ದ ಶಿಬಿರಕ್ಕೆ 250ರಿಂದ 300ರಷ್ಟು ಮಂದಿ ಹಾಜರಾಗುತ್ತಿದ್ದರು. ಅಷ್ಟು ವ್ಯಾಪಕವಾಗಿ ಮಧುಮೇಹ ಹರಡುತ್ತಿದೆ. ಇಂತಹ ಮಧುಮೇಹದ ನಿಯಂತ್ರಣಕ್ಕೆಂದೇ ಭಾರತದಲ್ಲಿ ಸಂಸ್ಥೆಯಿದೆ. ಆ ಸಂಸ್ಥೆ ಡಯಾಬಿಟೀಸ್ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿರುವಾಗ, ಸಂಪ್ಯದಂತಹ ಹಳ್ಳಿಯೊಂದರಲ್ಲಿ ಡಯಾಬಿಟೀಸ್ ಬಗ್ಗೆ ಶಿಬಿರ ನಡೆಸುತ್ತಿರುವುದನ್ನು ಗಮನಿಸಿದೆ. ಹಾಗೂ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇನ್ನೊಂದು ಕೇರಳ ಮೂಲದ ಸಂಸ್ಥೆಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ವಿವರಿಸಿದರು.
ಪ್ರಶಸ್ತಿ ಸ್ವೀಕರಿಸಲು ಭುವನೇಶ್ವರಕ್ಕೆ ಆಗಮಿಸಬೇಕು ಎಂದು ಆಹ್ವಾನ ನೀಡಿದ್ದರು. ಆದರೆ ಅಲ್ಲಿಗೆ ಹೋಗಲು ತಾನು ನಿರಾಕರಿಸಿದೆ. ಅವರ ಒತ್ತಾಯದ ಮೇರೆಗೆ ಭುವನೇಶ್ವರಕ್ಕೆ ತೆರಳಿ ಪ್ರಶಸ್ತಿ ಸ್ವೀಕರಿಸಿದೆ. ಭುವನೇಶ್ವರದಂತಹ ಪ್ರದೇಶದಲ್ಲಿ ಪುತ್ತೂರಿನ ಹೆಸರು ಕೇಳುವಾಗ ಆದ ಖುಷಿಯೇ ಅಷ್ಟಿಷ್ಟಲ್ಲ ಎಂದು ಸಂತಸ ವ್ಯಕ್ತಪಡಿಸಿದರು.
ಅಭಿನಂದಿಸಿ ಮಾತನಾಡಿದ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ಸೀತಾರಾಮ ಕೇವಳ, ವೈದ್ಯರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ವೈದ್ಯರ ಸಾಮಾಜಿಕ ಕಳಕಳಿಯ ಬಗ್ಗೆ ಹಲವಾರು ಕಥೆಗಳೇ ಪ್ರಚಲಿತದಲ್ಲಿವೆ. ಅಂತಹ ವೈದ್ಯರುಗಳಲ್ಲಿ ಡಾ. ಸುರೇಶ್ ಪುತ್ತೂರಾಯರೂ ಒಬ್ಬರು. ಅವರಿಗೆ ಮಧುಮೇಹ ಜಾಗೃತಿ ಉಪಕ್ರಮ ರಾಷ್ಟ್ರಪ್ರಶಸ್ತಿ ಅಥವಾ ಡಯಾಬಿಟೀಕ್ಸ್ ಅವಾರ್’ನೆಸ್ ಇನೀಷಿಯೇಟಿವ್ ಅವಾರ್ಡ್ 2024 ಒಲಿದು ಬಂದಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಶೆಟ್ಟಿ ಅಭಿನಂದನೆ ಸಲ್ಲಿಸಿದರು. ಟ್ರಸ್ಟ್ ನಿರ್ದೇಶಕರಾದ ಚಿದಾನಂದ ಬೈಲಾಡಿ, ಪ್ರವೀಣ್ ಕುಂಟ್ಯಾನ, ವಸಂತ ವೀರಮಂಗಲ, ನಾಗೇಶ್ ಕೆಡೆಂಜಿ, ಸತೀಶ್ ಪಾಂಬಾರು, ವೆಂಕಟೇಶ್ ಭಟ್ ಕೊಯಕ್ಕುಡೆ, ಯತೀಶ್, ಮುರಳೀಧರ್ ಕೆ.ಎಲ್., ಪ್ರಸಾದ್ ಕೆ.ಎನ್., ಸುಶಾಂತ್ ಕೆಡೆಂಜಿ, ನಿತಿನ್ ಕುಮಾರ್ ಮಂಗಳ ಹಾಗೂ ಪ್ರೇರಣಾ ಹಾಗೂ ನ್ಯೂಸ್ ಪುತ್ತೂರು ಸಿಬ್ಬಂದಿಗಳು ಉಪಸ್ಥಿತರಿದ್ದರು.