ಕೆರಗೋಡು: ಮಂಡ್ಯದ ಕೆರಗೋಡು ಗ್ರಾಮದಲ್ಲಿ ತೆರವು ಮಾಡಲಾದ ಹನುಮ ಧ್ವಜವನ್ನು ಮತ್ತೆ ಅದೇ ಜಾಗದಲ್ಲಿ ಮರುಸ್ಥಾಪನೆ ಮಾಡುವ ಶಪಥದೊಂದಿಗೆ ಹಿಂದೂ ಭಕ್ತರ ಬೃಹತ್ ಪಾದಯಾತ್ರೆ ಸೋಮವಾರ ಬೆಳಗ್ಗೆ ಕೋದಂಡರಾಮ ದೇವಾಲಯದಿಂದ ಆರಂಭವಾಗಿದೆ. 15 ಕಿ.ಮೀ. ದೂರದ ಮಂಡ್ಯ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆಯುವ ಈ ಬೃಹತ್ ಪ್ರತಿಭಟನೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಭಾಗವಹಿಸಲಿದ್ದಾರೆ. ಈಗಾಗಲೇ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ, ಬಿಜೆಪಿ ನಾಯಕ ಸಿ.ಟಿ. ರವಿ, ಮಳವಳ್ಳಿ ಮಾಜಿ ಶಾಸಕ ಅನ್ನದಾನಿ ಹಾಗೂ ಕೆಆರ್‌ಆರ್‌ಪಿ ಪಕ್ಷ ನಾಯಕ ಜನಾರ್ದನ ರೆಡ್ಡಿ ಭಾಗಿಯಾಗಿದ್ದಾರೆ. ಇನ್ನೂ ಹಲವು ನಾಯಕರು ಆಗಮಿಸುತ್ತಿದ್ದಾರೆ.
ಮರಲಿಂಗನದೊಡ್ಡಿ ಗ್ರಾಮದ ಮಹಿಳೆಯರು ಆರತಿ ಬೆಳಗಿ, ಈಡುಗಾಯಿ ಹೊಡೆದು ಪಾದಯಾತ್ರೆಗೆ ಶುಭ ಕೋರಿದ್ದಾರೆ. ಸಾವಿರಾರು ಗ್ರಾಮಸ್ಥರು ಹನುಮ ಧ್ವಜವನ್ನು ಹಿಡಿದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಕೆರಗೋಡಿನ ದೇವಸ್ಥಾನದಿಂದ ಆರಂಭಗೊಂಡ ಪಾದಯಾತ್ರೆ 15 ಕಿ.ಮೀ. ಕ್ರಮಿಸಿ ಮಂಡ್ಯ ಜಿಲ್ಲಾಧಿಕಾರಿ ಕಚೇರಿಗೆ ತಲುಪಲಿದೆ. ಇಲ್ಲಿ ಪ್ರತಿಭಟನಾ ಸಭೆ ಮತ್ತು ಮನವಿ ಸಲ್ಲಿಕೆ ನಡೆಯಲಿದೆ. ಪಾದಯಾತ್ರೆಯ ಮುಂದಿನ ಹಂತಗಳಲ್ಲಿ ಬಿಜೆಪಿ ಮುಖಂಡರಾದ ಆರ್.ಅಶೋಕ್, ಅಶ್ವಥ್ ನಾರಾಯಣ್ ಮುಂತಾದವರ ಜೊತೆಗೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕೂಡ ಭಾಗವಹಿಸಲಿದ್ದಾರೆ.
ಹಿಂದೂಪರ ಸಂಘಟನೆ ಕಾರ್ಯಕರ್ತರು ಪಾದಯಾತ್ರೆ ನಡೆಸುವ ಹಿನ್ನೆಲೆಯಲ್ಲಿ ಮಂಡ್ಯ ಎಸ್ಪಿ ಯತೀಶ್ ಎನ್. ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಪಾದಯಾತ್ರೆಗೆ ಬ್ರೇಕ್ ಹಾಕಲು ಮಂಡ್ಯ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದು, ಅಕ್ಕಪಕ್ಕದ ತಾಲೂಕುಗಳಿಂದ ಹೆಚ್ಚುವರಿ ಪೊಲೀಸ್ ತರಿಸಿ ನಿಯೋಜಿಸಲಾಗಿದೆ. ಸ್ಥಳದಲ್ಲಿ ಅಹಿತಕರ ಘಟನೆ ನಡೆಯದಂತೆ ಡಿಆರ್, ವಾಟರ್ ಜೆಟ್ ನಿಯೋಜನೆ ಮಾಡಲಾಗಿದ್ದು, ಪಾದಯಾತ್ರೆ ನಡೆಸುವವರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ.