ಬೆಳ್ತಂಗಡಿ: ವೇಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಕುಕ್ಕೇಡಿ ಗ್ರಾಮದ ಕಡ್ತ್ಯಾರು ಪಟಾಕಿ ತಯಾರಿಕಾ ಗೋಡೌನ್ ನಲ್ಲಿ ಪಟಾಕಿ ತಯಾರಿಕೆ ವೇಳೆ ಜ.28 ರಂದು ಸಂಜೆ ಸ್ಫೋಟ ಸಂಭವಿಸಿ ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೀಕ ಸೈಯದ್ ಬಶೀರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆ ಸಂಬಂಧಿಸಿದಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಶಾಂತಿ ಎಂಬವರು ನೀಡಿದ ದೂರಿನ ಮೇರೆಗೆ ಸುಡುಮದ್ದು ತಯಾರಿಕಾ ಘಟಕದ ಮಾಲೀಕ ಬಶೀರ್ ಮೇಲೆ ದೂರು ದಾಖಲಾಗಿತ್ತು.
ಪ್ರಕರಣ ಸಂಬಂಧ ಜಾಗ ಹಾಗೂ ಪಟಾಕಿ ತಯಾರಿಕಾ ಮಾಲೀಕ ಸೈಯದ್ ಬಶೀರ್ ಘಟನೆ ಬಳಿಕ ವೇಣೂರಿನಿಂದ ಪರಾರಿಯಾಗಿದ್ದಾಗ ಖಚಿತ ಮಾಹಿತಿ ಮೇರೆಗೆ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಅವರ ನೇತೃತ್ವದಲ್ಲಿ ಸುಳ್ಯದಲ್ಲಿ ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಲಾಗಿದೆ ಎನ್ನಲಾಗಿದೆ.
ಪ್ರಕರಣದಲ್ಲಿ ಮೂವರು ಮೃತಪಟ್ಟಿದ್ದು, ಇಬ್ಬರ ದೇಹ ಛಿದ್ರವಾಗಿ ಹೋಗಿತ್ತು. ರವಿವಾರ ಮಧ್ಯರಾತ್ರಿ ವರೆಗೂ ಶೋಧಕಾರ್ಯ ನಡೆಸಿದ ಪೊಲೀಸರು ಹಾಗೂ ಅಗ್ನಿಶಾಮಕದಳ, ಫೋರೆನಿಕ್ಸ್ ತಂಡ ದೇಹದ ಭಾಗಗಳನ್ನು ಪತ್ತೆಹಚ್ಚಿದೆ.
ಪಟಾಕಿ ತಯಾರಿಕಾ ಘಟಕಕ್ಕೆ ಎಸ್.ಪಿ. ಕಚೇರಿಯಿಂದ ಅನುಮತಿ ಪಡೆದಿದ್ದರೂ ಕೂಡ, ಫೈರ್ ಆ್ಯಂಡ್ ಸೇಫ್ಟಿ ವಿಚಾರವಾಗಿ ಅಗ್ನಿಶಾಮಕದಳದಿಂದ ಯಾವುದೇ ಪರವಾನಿಗೆ ಪಡೆದಿರಲಿಲ್ಲ. ಹೀಗಿದ್ದರೂ ಪಟಾಕಿ ಗೋದಾಮಿಗೆ ಸಾರ್ವಜನಿಕ ಸ್ಥಳದಲ್ಲಿ ಅನುಮತಿ ನೀಡಿದ್ದಾದರು ಹೇಗೆ? ಸ್ಥಳದಲ್ಲಿ ದೊರೆತ ಬಾಂಬ್ ರೂಪ್ ವಸ್ತುಗಳ ತಯಾರಿಗೆ ಅನುಮತಿ ಇತ್ತೇ ? ಪರಿಣತರಲ್ಲದ ಕಾರ್ಮಿಕರನ್ನು ಬಳಸಿ ಕೃತ್ಯ ನಡೆಸಲಾಗುತ್ತಿತ್ತೇ ಎಂಬುದರ ಬಗ್ಗೆ ಪೊಲೀಸ್ ತನಿಖೆಯಿಂದ ಮಾಹಿತಿ ಹೊರಬರಬೇಕಿದೆ.