ಸುಳ್ಯ: ಪ್ರಧಾನಿ ನರೇಂದ್ರ ಮೋದಿ ಅವರ ಪರೀಕ್ಷಾ ಪೇ ಚರ್ಚಾ – 7 ಕಾರ್ಯಕ್ರಮದಲ್ಲಿ ವೈಜ್ಞಾನಿಕ ಮಾದರಿ ಪ್ರದರ್ಶಿಸಲು ಸುಳ್ಯದ ಅಚಲ್ ಬಿಳಿನೆಲೆ ಆಯ್ಕೆಯಾಗಿದ್ದಾರೆ.
ಮುಡಿಪು ಜವಾಹರ್ ನವೋದಯ ವಿದ್ಯಾಲಯದ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿರುವ ಅಚಲ್ ಬಿಳಿನೆಲೆ ಅವರು, ಜ. 29ರಂದು ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯುವ ಪರೀಕ್ಷಾ ಪೇ ಚರ್ಚಾ – 7 ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಆಯ್ದ ವಿದ್ಯಾರ್ಥಿಗಳೊಂದಿಗೆ ಪರೀಕ್ಷಾ ಒತ್ತಡ ನಿರ್ವಹಣೆಯ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭ ಚಂದ್ರಯಾನ 3 ಇದರ ಕಾರ್ಯವೈಖರಿಯ ಬಗ್ಗೆ ಅಚಲ್ ಬಿಳಿನೆಲೆ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ವಿವರಿಸಲಿದ್ದಾರೆ.
ದೇಶದಲ್ಲಿರುವ 600ಕ್ಕೂ ಹೆಚ್ಚು ಜವಾಹರ್ ನವೋದಯ ವಿದ್ಯಾಲಯಗಳ ಪೈಕಿ 8 ವಿದ್ಯಾಲಯಗಳಿಗೆ ಮಾತ್ರ ಈ ಅವಕಾಶ ದೊರಕಿದೆ. ಇದರಲ್ಲಿ ಅಚಲ್ ಬಿಳಿನೆಲೆ ಅವರು ಹೈದರಾಬಾದ್ ರೀಜನನ್ನು ಪ್ರತಿನಿಧಿಸಲಿದ್ದಾರೆ.
ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್, ಕೀಬೋರ್ಡಿನಲ್ಲಿ ಜೂನಿಯರ್ ಮುಗಿಸಿರುವ ಅಚಲ್ ಬಿಳಿನೆಲೆ ಅವರು ಉಪನ್ಯಾಸಕ, ವ್ಯಕ್ತಿತ್ವ ವಿಕಸನ ತರಬೇತುದಾರ ಚಂದ್ರಶೇಖರ್ ಬಿಳಿನೆಲೆ ಹಾಗೂ ಡಾ. ಅನುರಾಧಾ ಕುರುಂಜಿ ಅವರ ಪುತ್ರ.
ಅಚಲ್ ಅವರ ತಾಯಿ ಡಾ. ಅನುರಾಧಾ ಕುರುಂಜಿ ಅವರು 1999ರಲ್ಲಿ ಎನ್.ಎಸ್.ಎಸ್.ನಿಂದ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸಿದ್ದರು. ಆ ಸಂದರ್ಭ ಅಂದರೆ 1999ರ ಜನವರಿ 29ರಂದು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಭೇಟಿಯಾಗಿದ್ದರು. ಕಾಕತಾಳೀಯ ಎಂಬಂತೆ, ಅಚಲ್ ಬಿಳಿನೆಲೆ ಅವರು 2024ರ ಜನವರಿ 29ರಂದೇ ಈಗಿನ ಪ್ರಧಾನಿಯನ್ನು ಭೇಟಿಯಾಗುತ್ತಿದ್ದಾರೆ.