ಮಂಗಳ ಗ್ರಹದ ಅಧ್ಯಯನಕ್ಕೆ ತೆರಳಿದ್ದ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಬಾಹ್ಯಾಕಾಶ ನೌಕೆ ‘ಇಂಜೆನ್ಯುಯಿಟಿ’ ತನ್ನ ಹಾರಾಟವನ್ನು ನಿಲ್ಲಿಸಿದೆ.
ನಾಸಾದ ಪುಟ್ಟ ಹೆಲಿಕಾಪ್ಟರ್ ‘ಇಂಜೆನ್ಯುಯಿಟಿ’ ಮಂಗಳ ಗ್ರಹದಲ್ಲಿ ತನ್ನ ಕಡೆಯ ಹಾರಾಟವನ್ನು ನಡೆಸಿ ಹಾರಾಟ ಸ್ಥಗಿತಗೊಳಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ನಾಸಾ, 1.8 ಕೆ.ಜಿ ತೂಕದ ‘ಇಂಜೆನ್ಯುಯಿಟಿ’ ಮತ್ತೆಂದೂ ಹಾರಾಟ ನಡೆಸುವುದಿಲ್ಲ. ನೌಕೆಯ ರೆಕ್ಕೆಗಳು ಜಖಂಗೊಂಡಿದ್ದು, ಹೀಗಾಗಿ ಇದರ ಕಾರ್ಯ ಸ್ಥಗಿತವಾಗಿದೆ. ಪ್ರಸ್ತುತ ಬಿದ್ದಿರುವ ನೌಕೆ ಮಂಗಳ ಗ್ರಹದಲ್ಲಿಯೇ ಇರಲಿದ್ದು, ನಿಯಂತ್ರಣ ಕೊಠಡಿ ಜೊತೆ ಸಂಪರ್ಕದಲ್ಲಿರಲಿದೆ. ಈ ಮೂಲಕ 706 ಕೋಟಿ ರೂ ವೆಚ್ಚದ (85 ಮಿಲಿಯನ್ ಡಾಲರ್) ಯೋಜನೆ ಅಂತ್ಯಗೊಂಡಿದೆ ಎಂದು ನಾಸಾ ಅಧಿಕಾರಿಗಳು ತಿಳಿಸಿದ್ದಾರೆ.
‘ಅಲ್ಪಾವಧಿಯ ತಾಂತ್ರಿಕ ಪ್ರಾತ್ಯಕ್ಷಿಕೆ ಉದ್ದೇಶದ ‘ಇಂಜೆನ್ಯುಯಿಟಿ’, ಸಣ್ಣ ಗಾತ್ರದ ರೊಬೊಟಿಕ್ ಹೆಲಿಕಾಪ್ಟರ್ 2021ರಲ್ಲಿ ಮಂಗಳ ಗ್ರಹಕ್ಕೆ ಕಾಲಿಟ್ಟಿತ್ತು. ಮೂರು ವರ್ಷಗಳಲ್ಲಿ 72 ಬಾರಿ ಹಾರಾಟ ನಡೆಸಿದ್ದು, 19 ಕಿ.ಮೀ. ಕ್ರಮಿಸಿದೆ. ಇದು, ಉದ್ದೇಶಿತ ಯೋಜನೆಗಿಂತಲೂ 14 ಪಟ್ಟು ಅಧಿಕ. 24 ಮೀಟರ್ ಎತ್ತರದಲ್ಲಿ ಗಂಟೆಗೆ 36 ಕಿ.ಮೀ ವೇಗದಲ್ಲಿ ಈ ಹೆಲಿಕಾಪ್ಟರ್ ಕ್ರಮಿಸಿದೆ. ಈ ಅಸಾಧಾರಣ ಹೆಲಿಕಾಪ್ಟರ್ ನಿರೀಕ್ಷಿಸಿದ್ದಕ್ಕಿಂತಲೂ ಎತ್ತರದಲ್ಲಿ ಹಾರಾಟ ನಡೆಸಿದ್ದು, ಭಿನ್ನ ವಾತಾವರಣದಲ್ಲಿಯೂ ತನ್ನ ಸಾಮರ್ಥ್ಯ ನಿರೂಪಿಸಿತ್ತು’ ಎಂದು ನಾಸಾದ ಆಡಳಿತಾಧಿಕಾರಿ ಬಿಲ್ ನೆಲ್ಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳೆದ ವಾರ ಹಾರಾಟದ ಬಳಿಕ ಹೆಲಿಕಾಪ್ಟರ್ ಅನ್ನು ಇಳಿಸುವಾಗ ಅದರ ರೆಕ್ಕೆಗಳು ಜಖಂಗೊಂಡಿರುವುದು ಗೊತ್ತಾಯಿತು. ಈ ರೆಕ್ಕೆಗಳು ಬಳಕೆಗೆ ಸೂಕ್ತವಾಗಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.