ಬೆಂಗಳೂರು: ನಮ್ಮ ಮುಂದಿರುವ ಗುರಿ ಲೋಕಸಭಾ ಚುನಾವಣೆ. ಆ ಲೋಕಸಭಾ ಚುನಾವಣೆ ಆಗುವವರೆಗೂ ನಾವು ವಿಶ್ರಾಂತಿ ಪಡೆಯುವ, ಮನೆಯಲ್ಲಿ ಕುಳಿತುಕೊಳ್ಳುವ ಸಂದರ್ಭ ಉದ್ಭವಿಸಬಾರದು. ನಮ್ಮ ಸಾಧನೆಗಳನ್ನು ಜನರ ಮುಂದಿಟ್ಟು, ಹಗಲು ರಾತ್ರಿ ಪಕ್ಷದ ಗೆಲುವಿಗಾಗಿ ಶ್ರಮ ಹಾಕಬೇಕಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ಆರಂಭವಾದ ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿಣಿಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಒಂದು ಕಡೆ ಲೋಕಸಭಾ ಚುನಾವಣೆ ಬರುತ್ತಿದೆ. ಇನ್ನೊಂದೆಡೆ ನೂರಾರು ವರ್ಷಗಳ ತಪಸ್ಸಿನ ಫಲವಾಗಿ ಜ. 22ರಂದು ನಮ್ಮ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ರಾಮನ ಪ್ರಾಣಪ್ರತಿಷ್ಠೆ ಆಗಿರುವ ಶುಭ ಘಳಿಗೆಯಲ್ಲಿ ನಾವೆಲ್ಲ ಇಲ್ಲಿ ಸೇರಿದ್ದೇವೆ. ಆದರೆ, ಯಾವ ಶುಭ ಘಳಿಗೆಯಲ್ಲಿ ನಾವೆಲ್ಲ ಇದ್ದೇವೆ ಎಂದರೆ, ಕಳೆದ ಹಲವಾರು ದಶಕಗಳಿಂದ ನಿರಂತರವಾದ ಹೋರಾಟ. ಪ್ರಭು ಶ್ರೀರಾಮಚಂದ್ರನ ಮಂದಿರ ಲೋಕಾರ್ಪಣೆಗೆ ನಿರಂತರ ಹೋರಾಟ ನಡೆದಿತ್ತು ಎಂದು ನೆನಪಿಸಿದರು.
ಒಂದು ದಿನವೂ ವಿಶ್ರಾಂತಿಯನ್ನು ತೆಗೆದುಕೊಳ್ಳದೆ, ನಮ್ಮ ಪ್ರಧಾನಮಂತ್ರಿಗಳು ದೇಶದ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಈ ಮೂಲಕ ಇವತ್ತು ಭಾರತವನ್ನು ಮುನ್ನಡೆಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರಿಂದ, ಕಾರ್ಯಕರ್ತರಿಗಾಗಿ, ಕಾರ್ಯಕರ್ತರಿಗೋಸ್ಕರ ಇರುವ ಪಕ್ಷ ಎಂದು ವಿವರಿಸಿದರು.
ಜಮ್ಮು ಕಾಶ್ಮೀರವು ಹಲವಾರು ವರ್ಷಗಳಿಂದ ಉಗ್ರಗಾಮಿಗಳ ಚಟುವಟಿಕೆಯಿಂದ ತತ್ತರಿಸಿ ಹೋಗಿತ್ತು. ಅಲ್ಲಿದ್ದ ಆರ್ಟಿಕಲ್ 370 ರದ್ದುಪಡಿಸಿದರೆ ಅಲ್ಲೋಲ ಕಲ್ಲೋಲ ಆಗಲಿದೆ ಎಂದು ಬಿಂಬಿಸುವ ಕೆಲಸ ಕಾಂಗ್ರೆಸ್‍ನಿಂದ ಆಗಿತ್ತು. ನರೇಂದ್ರ ಮೋದಿಯವರ ದಿಟ್ಟ ನಾಯಕತ್ವ ಮತ್ತೊಂದು ಕಡೆ ಹೆಮ್ಮೆಯ ಗೃಹ ಸಚಿವ ಅಮಿತ್ ಶಾ ಅವರ ದಿಟ್ಟ ನಿರ್ಧಾರದಿಂದ ಆರ್ಟಿಕಲ್ 370 ರದ್ದು ಮಾಡುವ ಮೂಲಕ ಅಲ್ಲಿದ್ದ ಉಗ್ರಗಾಮಿ ಚಟುವಟಿಕೆಗಳಿಗೆ ಆರ್ಥಿಕ ಶಕ್ತಿ ಕೊಡುವುದನ್ನೂ ಬುಡಸಮೇತ ಕಿತ್ತು ಹಾಕುವ ಕೆಲಸ ಆಗಿದೆ ಎಂದು ಮೆಚ್ಚುಗೆ ಸೂಚಿಸಿದರು.
ಒಂದು ಕಡೆ ಅಯೋಧ್ಯೆ ವಿಚಾರದಲ್ಲಿ ಜನರೆಲ್ಲರೂ ಸಂತೋಷದಿಂದಿದ್ದರೆ, ರಾಜ್ಯದಲ್ಲಿದ್ದ ದುಷ್ಟ ಕಾಂಗ್ರೆಸ್ ಸರಕಾರವು, ಹುಬ್ಬಳ್ಳಿಯ ಶ್ರೀಕಾಂತ ಪೂಜಾರಿಯವರನ್ನು ಬಂಧಿಸಿ ಸೇಡು ತೀರಿಸುವ ಕೆಲಸ ಮಾಡಿದೆ. ಸರಕಾರ ಬಂದು 8 ತಿಂಗಳಾದರೂ ಸಹ ಕಾನೂನು- ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಟೀಕಿಸಿದರು.
ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಭೂಪೇಂದ್ರ ಯಾದವ್, ಪ್ರಹ್ಲಾದ್ ಜೋಶಿ, ರಾಜೀವ್ ಚಂದ್ರಶೇಖರ್, ಭಗವಂತ ಖೂಬಾ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಡಿ.ವಿ. ಸದಾನಂದಗೌಡ, ಜಗದೀಶ್ ಶೆಟ್ಟರ್, ರಾಜ್ಯದ ಮಾಜಿ ಉಪಮುಖ್ಯಮಂತ್ರಿಗಳಾದ ಸಿ.ಎನ್. ಅಶ್ವತ್ಥನಾರಾಯಣ್, ಗೋವಿಂದ ಕಾರಜೋಳ, ಕೆ.ಎಸ್. ಈಶ್ವರಪ್ಪ, ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಬಿಜೆಪಿ ನಿಕಟಪೂರ್ವ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.