ಪುತ್ತೂರು: ಐತಿಹಾಸಿಕ ಪುತ್ತೂರು ಕೋಟಿ – ಚೆನ್ನಯ ಜೋಡುಕರೆ ಕಂಬಳಕ್ಕೆ ಶನಿವಾರ ಬೆಳಿಗ್ಗೆ ಚಾಲನೆ ನೀಡಲಾಯಿತು.
ದೇವರಮಾರು ಗದ್ದೆಯಲ್ಲಿ ನಿರ್ಮಿಸಲಾದ ಅಚ್ಚುಕಟ್ಟಿನ ಕೋಟಿ – ಚೆನ್ನಯ ಕರೆಯಲ್ಲಿ ತೆಂಗಿನಕಾಯಿ ಒಡೆಯುವ ಮೂಲಕ ಎರಡು ದಿನದ ಹೊನಲು ಬೆಳಕಿನ ಕಂಬಳ ಉದ್ಘಾಟನೆಗೊಂಡಿತು.
ಇನ್ನೊಂದೆಡೆ ಕಂಬಳಕ್ಕೆ ಆಗಮಿಸುತ್ತಿದ್ದ ಕೋಣಗಳನ್ನು ಶ್ರೀ ಮಹಾಲಿಂಗೇಶ್ವರ ದೇವರ ಮುಂಭಾಗಕ್ಕೆ ಕೊಂಡೊಯ್ದು, ದೇವರಿಗೆ ನಮಿಸಿ ಪ್ರಾರ್ಥನೆ ಸಲ್ಲಿಸುವ ದೃಶ್ಯ ಕಂಡುಬರುತ್ತಿದೆ. ಕೋಣಗಳು ಎರಡು ಮೊಣಕಾಲುಗಳನ್ನು ಊರಿ ದೇವರಿಗೆ ನಮಿಸುವುದನ್ನು ನೋಡುವುದೇ ಚಂದ.
ಉದ್ಘಾಟನೆ ಬಳಿಕ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ನಡೆದ ಸಭೆಯಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಸವಣೂರು ಶಿಲ್ಪಿ, ಸಹಕಾರಿ ಧುರೀಣ ಸವಣೂರು ಸೀತಾರಾಮ ರೈ, ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ರೆ. ಫಾ. ಆ್ಯಂಟನಿ ಪ್ರಕಾಶ್ ಮೊಂತೇರೊ, ತಾಪಂ ಇಓ ನವೀನ್ ಕುಮಾರ್ ಭಂಡಾರಿ, ಸುದಾನ ವಸತಿಯುತ ಶಾಲಾ ಸಂಚಾಲಕ ವಿಜಯ ಹಾರ್ವಿನ್, ಅಕ್ಷಯ ಕಾಲೇಜು ಅಧ್ಯಕ್ಷ ಜಯಂತ ನಡುಬೈಲು ಮೊದಲಾದವರು ಉಪಸ್ಥಿತರಿದ್ದರು.
ನಿರಂಜನ್ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿ, ಕಂಬಳ ಸಮಿತಿ ಸಂಚಾಲಕ ವಸಂತ್ ರೈ ವಂದಿಸಿದರು.
ಬಳಿಕ ಕೋಣಗಳನ್ನು ಮಂಜೊಟ್ಟಿಯಿಂದ ಕರೆಗಿಳಿಸಲಾಯಿತು. ಕೋಣಗಳಿಗೆ ಕರೆಯ ನೀರನ್ನು ಪ್ರೋಕ್ಷಣೆ ಮಾಡಿ, ಕೋಣಗಳ ಬಾಯಿಗೆ ಕರೆಯ ನೀರನ್ನು ಹಾಕಿದ ಕೋಣದ ಮಾಲಕರು, ತಾವು ಕರೆಯ ನೀರನ್ನು ಪ್ರೋಕ್ಷಣೆ ಮಾಡಿಕೊಳ್ಳುತ್ತಾ ಕರೆಗೆ ನಮಿಸಿದರು. ನಂತರ ಕೋಣಗಳನ್ನು ಕರೆಯ ಇನ್ನೊಂದು ತುದಿಗೆ ಕೊಂಡೊಯ್ದು, ಇನ್ನೊಂದು ಕರೆಯಿಂದ ಓಡಿಸಲಾಯಿತು. ಒಂದಾದ ನಂತರ ಒಂದರಂತೆ ಕೋಣಗಳನ್ನು ಓಡಿಸಲಾಗುತ್ತಿದೆ.