ಕಾಣಿಯೂರು: ದೈವ ನರ್ತನದ ವೇಳೆಯೇ ಕುಸಿದು ಬಿದ್ದು ಮೃತಪಟ್ಟಿದ್ದ ದೈವ ನರ್ತಕನ ಪುತ್ರ ಮೋನಪ್ಪ ಅವರಿಗೆ ದೈವ ಅಭಯ ನೀಡಿದೆ.
ಚಾರ್ವಾಕದ ಇಡ್ಯಡ್ಕ ತರವಾಡು ಮನೆಯಲ್ಲಿ ಕೆಲ ಸಮಯಗಳ ಹಿಂದೆ ಶಿರಾಡಿ ದೈವದ ನರ್ತನ ಸೇವೆ ಮಾಡುತ್ತಿದ್ದ ಕಾಂತು ಅಜಿಲ ಅವರು ಕುಸಿದು ಬಿದ್ದು ಮೃತಪಟ್ಟಿದ್ದರು. ದೈವ ನರ್ತನದ ವೇಳೆಯೇ ನರ್ತಕ ಸಾವಿಗೀಡಾದ್ದದ್ದು ಹಲವು ಪ್ರಶ್ನೆಗಳಿಗೆ ಕಾರಣವಾಗಿತ್ತು.
ಇದೀಗ ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೆ ಸಮೀಪಿಸುತ್ತಿದೆ. ಈ ಸಂದರ್ಭ ನಡೆಯುವ ದೈವಗಳ ನೇಮೋತ್ಸವದ ವಿಚಾರ ಪ್ರಸ್ತಾಪವಾದಾಗ, ಯಾರು ದೈವ ನರ್ತನ ಮಾಡುವುದು ಎಂಬ ಪ್ರಶ್ನೆ ಮೂಡಿದೆ. ಹೀಗಾಗಿ ಮತ್ತೊಮ್ಮೆ ವಿಚಾರ ಮುನ್ನೆಲೆಗೆ ಬಂದಿದೆ.
ಹಾಗಾಗಿ ಪ್ರಶ್ನಾ ಚಿಂತನೆಯ ಮೊರೆ ಹೋಗಲಾಯಿತು. ಪ್ರಶ್ನೆಯಲ್ಲಿ, ಕಾಂತು ಅಜಿಲ ಅವರ ಇಬ್ಬರು ಪುತ್ರರಲ್ಲಿ ಓರ್ವರಾದ ಮೋನಪ್ಪ ಅವರು ದೈವ ನರ್ತನ ಮಾಡಬೇಕು ಎಂದು ಕಂಡುಬಂದಿತು.
ಪ್ರಶ್ನೆ ಚಿಂತನೆಯಲ್ಲಿ ಕಂಡುಬಂದಂತೆ, ದೈವದ ಅನುಮತಿ ಪಡೆದು, ಇತ್ತೀಚೆಗೆ ಎಡಮಂಗಲ ಶ್ರೀ ಅಮ್ಮನವರ ಕ್ಷೇತ್ರದಲ್ಲಿ ನಡೆದ ಶಕ್ತಿ ಪೂಜೆಯಲ್ಲಿ ಮೋನಪ್ಪ ಅವರು ದೈವ ನರ್ತನ ಆರಂಭಿಸಿದರು. ಮುಂದೆ ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ದೈವ ನರ್ತನದ ಹೊಣೆಗಾರಿಕೆಯೂ ಅವರಿಗೆ ಸೇರಿದೆ ಎಂದು ತಿಳಿದುಬಂದಿದೆ.