ಶಿವಮೊಗ್ಗ: ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರರನ್ನು ಮತ್ತೊಮ್ಮೆ ಗೆಲ್ಲಿಸಿ ಎಂದು ಕಾಂಗ್ರೆಸ್ ಹಿರಿಯ ನಾಯಕ ದಾವಣಗೆರೆ ದಕ್ಷಿಣ ಕ್ಷೇತ್ರ ಶಾಸಕ, ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ಬೆಕ್ಕಿನಕಲ್ಮಠದಲ್ಲಿಜಗದ್ಗುರು ಶ್ರೀ ಗುರುಬಸವ ಸ್ವಾಮೀಜಿಗಳ 112ನೇ ಪುಣ್ಯ ಸ್ಮರಣೋತ್ಸವ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ ಭಾವೈಕ್ಯ ಸಮ್ಮೇಳನ ಹಾಗೂ ಗುರು ಬಸವಶ್ರೀ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಶಾಮನೂರು ಶಿವಶಂಕರಪ್ಪ ಅವರು, ”ರಾಘವೇಂದ್ರ ಅವರಂತಹ ಸಂಸತ್ ಸದಸ್ಯರನ್ನು ಪಡೆದ ನೀವೇ ಧನ್ಯರು. ಏಕೆಂದರೆ ತಮ್ಮ ಕ್ಷೇತ್ರದಲ್ಲಿ ಯಾವ ಕೆಲಸಗಳಾಗಬೇಕೆಂದು ನೋಡಿಕೊಂಡು ಆ ಎಲ್ಲವನ್ನು ತಮ್ಮ ಕೈಯಿಂದ ಆಗದೇ ಇದ್ದರೂ ಸಹ ಆಗುವಂತಹ ರೀತಿಯಲ್ಲಿ ಕೆಲಸಗಳನ್ನು ಮಾಡಿ ತೋರಿಸಿಕೊಟ್ಟ ಧೀಮಂತ ನಾಯಕ ಎಂದರೆ ತಪ್ಪಾಗಲಾರದು ” ಎಂದರು.
ಅಂತೆಯೇ “ಇನ್ನೇನು ಎರಡು ತಿಂಗಳಲ್ಲಿ ಲೋಕಸಭೆ ಚುನಾವಣೆ ಬರಲಿದೆ. ರಾಘವೇಂದ್ರ ಅವರೇ ಸ್ಪರ್ಧಿಸುತ್ತಾರೆ. ಬಿಜೆಪಿಯಿಂದ ಬೇರೆ ಯಾರಿಗೂ ಟಿಕೆಟ್ ನೀಡುವುದಿಲ್ಲ. ಅವರು ಮತ್ತೆ ಸ್ಪರ್ಧೆ ಮಾಡೇ ಮಾಡುತ್ತಾರೆ. ಅವರು ಕ್ಷೇತ್ರದ ಅಭಿವೃದ್ಧಿಗೆ ಎಷ್ಟು ಕೆಲಸ ಮಾಡಿದ್ದಾರೆ ಎಂಬುದನ್ನು ಸಮತೂಕ ಮಾಡಿ ಅವರನ್ನು ಗೆಲ್ಲಿಸುವಂತಹ ದೊಡ್ಡ ಕರ್ತವ್ಯ ನಿಮ್ಮದಾಗಿದೆ. ಕ್ಷೇತ್ರದ ಜನತೆಗೆ ಏನು ಬೇಕು? ಅವರು ಬಯಸಿದ್ದು ಅಭಿವೃದ್ಧಿ. ಅಂತಹ ನಾಯಕನನ್ನು ಆಯ್ಕೆ ಮಾಡುವುದು ನಮ್ಮ ಕರ್ತವ್ಯ. ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರು ಅಭಿವೃದ್ಧಿಗೆ ಆದ್ಯತೆ ನೀಡಿ ಮುಂಬರುವ ಚುನಾವಣೆಯಲ್ಲಿ ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರೂ ಕೂಡ ಆಗಿರುವ ಶಾಮನೂರು ಶಿವಶಂಕರಪ್ಪ ಹೇಳಿದರು.
ಶಿವಮೊಗ್ಗ ಅಭಿವೃದ್ಧಿಗೆ ಬದ್ಧ: ಬಿವೈ ರಾಘವೇಂದ್ರ1
ಬಳಿಕ ಮಾತನಾಡಿದ ಸಂಸದ ಬಿವೈ ರಾಘವೇಂದ್ರ ಗುರು ಹಿರಿಯರ ಮಾರ್ಗದರ್ಶನದಲ್ಲಿ ಭಾರತ ದೇಶವು ಸದೃಢವಾಗಿ ಮುನ್ನಡೆಯುತ್ತಿದ್ದು, ಶ್ರೇಷ್ಠ ಧಾರ್ಮಿಕ ಹಿನ್ನೆಲೆ ಹೊಂದಿರುವ ಐತಿಹಾಸಿಕ ದೇಶ ನಮ್ಮದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಕ್ರಮ ಆಗುತ್ತಿದ್ದು, ಇಂದು ಸವಳಂಗ ರಸ್ತೆ ಮೇಲ್ಸೇತುವೆ ಉದ್ಘಾಟನೆಯಾಗಿದೆ. ಎಫ್.ಎಂ, ಹೆದ್ದಾರಿ ಕಾಮಗಾರಿ, ಪ್ರವಾಸಿ ತಾಣಗಳ ಅಭಿವೃದ್ಧಿ ಹೀಗೆ ನೂರಾರು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಅಲ್ಲಮ ಪ್ರಭು ಜನ್ಮಸ್ಥಳ ಅಭಿವೃದ್ಧಿಗೆ ಕೇಂದ್ರದ ಪುರಾತತ್ವ ಇಲಾಖೆ ಒಪ್ಪಿಗೆ ನೀಡಿದ್ದು, 4 ಕೋಟಿ ರೂ. ವೆಚ್ಚದಲ್ಲಿಸರಕಾರದಿಂದ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.