ಪುತ್ತೂರು: ಸ್ವಾಮಿ ವಿವೇಕಾನಂದರ 161ನೇ ಜಯಂತ್ಯೋತ್ಸವದ ಪ್ರಯುಕ್ತ ನೀಡುವ ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ದೇವಚಳ್ಳ ಗ್ರಾ.ಪಂ. ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ಆಯ್ಕೆಯಾಗಿದ್ದಾರೆ. ಸಾಂಘಿಕ ಪ್ರಶಸ್ತಿಗೆ ಪೆರುವಾಜೆಯ ಭಾವೈಕ್ಯ ಯುವಕ ಮಂಡಲ ಆಯ್ಕೆಯಾಗಿದೆ.
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು, ವಿಜಯಪುರ ಜಿಲ್ಲಾ ಹಾಗೂ ತಾಲೂಕು ಘಟಕ ಮುದ್ದೇಬಿಹಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಪುರ, ಸಾಧನಾ ಮಹಿಳಾ ಒಕ್ಕೂಟ ಮುದ್ದೇಬಿಹಾಳ, ಧರ್ಮಯುದ್ಧ ದಿನ ಪತ್ರಿಕಾ ಬಳಗ ಮುದ್ದೇಬಿಹಾಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಜ.28ರಂದು ಮುದ್ದೇಬಿಹಾಳದ ವಿಬಿಸಿ ಹೈಸ್ಕೂಲ್ ಸಭಾಂಗಣದಲ್ಲಿ ನಡೆಯುವ ಸ್ವಾಮಿ ವಿವೇಕಾನಂದರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಉತ್ತಮ ಸಂಘಟನಾ ಚತುರರಾಗಿರುವ ಶೈಲೇಶ್ ಅಂಬೆಕಲ್ಲು ಅವರು, ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ನೂರಕ್ಕೂ ಹೆಚ್ಚು ಸಲ ರಕ್ತದಾನ ಮಾಡುವ ಮೂಲಕ ಹಲವರಿಗೆ ಜೀವದಾನ ಮಾಡಿದ್ದಾರೆ. ಕೊರೊನಾ ಅವಧಿಯಲ್ಲಿ ಕೊರೊನಾ ವಾರಿಯರ್ ಆಗಿ ಗ್ರಾಮದ ಜನರಿಗೆ ಅಗತ್ಯ ಸೇವೆಗಳನ್ನು ಜೀವದ ಹಂಗು ತೊರೆದು ಸೇವೆ ಸಲ್ಲಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಗ್ರಾ.ಪಂ. ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಸದಸ್ಯರಾಗಿ ಆಯ್ಕೆಯಾಗಿ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ.
























