ಬೆಂಗಳೂರು: ಸಂವಿಧಾನವನ್ನು ನಾವು ರಕ್ಷಿಸಿದರೆ, ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ. ಸಂವಿಧಾನವನ್ನು ಅರಿಯುವ ಮೂಲಕ ಸಂವಿಧಾನವನ್ನು ಬಲಪಡಿಸೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಾಡಿನಲ್ಲಿ 75ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ, ಮಹಾತ್ಮಾ ಗಾಂಧೀಜಿ ಹಾಗೂ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಗೌರವ ನಮನ ಸಲ್ಲಿಸಿದರು. ಬಳಿಕ ರಾಜ್ಯದ ಜನತೆಗೆ ಗಣರಾಜ್ಯೋತ್ಸವ ಜನತೆಗೆ ಶುಭಾಶಯಗಳನ್ನು ಕೋರಿದರು.
ಈ ನಡುವೆ ಸಾಮಾಜಿಕ ಜಾಲತಾಣ ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ಭಾರತವು ತನ್ನನ್ನು ತಾನು ಆಳಿಕೊಳ್ಳಲು ರಚಿಸಿಕೊಂಡ ಸಂವಿಧಾನ ಜಾರಿಗೆ ಬಂದು 2024ರ ಜನವರಿ 26ಕ್ಕೆ 75 ವರ್ಷಗಳು ತುಂಬುತ್ತಿದೆ. ಭಾರತದ ಎಲ್ಲ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು, ಚಿಂತನೆ, ಅಭಿವ್ಯಕ್ತಿ ನಂಬಿಕೆ ಮತ್ತು ಆರಾಧನೆಯ ಸ್ವಾತಂತ್ರ್ಯವನ್ನು, ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆಯನ್ನು ಖಾತರಿಪಡಿಸಿ, ಎಲ್ಲರ ನಡುವೆ ಭ್ರಾತೃತ್ವವನ್ನು ಉದ್ದೀಪನಗೊಳಿಸುವುದೇ ಸಂವಿಧಾನದ ಮೂಲ ಆಶಯವಾಗಿದೆ.
ವಿಶ್ವಕ್ಕೆ ಮಾದರಿ ಸ್ವರೂಪದ ಇಂತಹದ್ದೊಂದು ಸಂವಿಧಾನವನ್ನು ನಮಗೆ ನೀಡಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಈ ಸಂದರ್ಭದಲ್ಲಿ ನೆನಪು ಮಾಡಿಕೊಂಡು ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ. ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು ಎಂದು ಹೇಳಿದರು.