ಪುತ್ತೂರು: ಬನ್ನೂರು ಗ್ರಾಮದ ಅಲುಂಬುಡದಲ್ಲಿ ಕಾರ್ಯಾಚರಿಸುತ್ತಿರುವ ಎವಿಜಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭ “ಎವಿಜಿ ಚಿಣ್ಣರೋತ್ಸವ” ಶುಕ್ರವಾರ ನಡೆಯಿತು.
ಸಮಾರಂಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಪುತ್ತೂರಿನಲ್ಲಿ ಆಂಗ್ಲ ಮಾಧ್ಯಮ ಶಾಲಾ ಆರಂಭಗೊಳ್ಳುವುದು ಒಳ್ಳೆಯ ವಿಚಾರ. ಮಕ್ಕಳಿಗೆ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸ ನೀಡುವುದು ಪೋಷಕರ ಆಶಯವಾಗಿದೆ. ದಿನದಿಂದ ದಿನಕ್ಕೆ ಶಾಲಾ ಮಕ್ಕಳ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಸರಕಾರಿ ಶಾಲೆಗಳು ಕೆಪಿಎಸ್ ಮಾದರಿ ಶಾಲೆಗಳು ಇನ್ನಷ್ಟು ಬರಲಿದೆ. ಇದೀಗ ಈ ಪರಿಸರದ ಮಕ್ಕಳಿಗೆ ಎ.ವಿ.ನಾರಾಯಣ ಅವರು ಒಳ್ಳೆಯ ಶಿಕ್ಷಣ ಸಂಸ್ಥೆಯನ್ನು ತೆರೆದಿದ್ದಾರೆ. ಇಲ್ಲಿ ಕಲಿಯುವ ಮಕ್ಕಳು ಒಳ್ಳೆಯ ವ್ಯಕ್ತಿಯಾಗಿ ಬೆಳೆಯಲಿ, ಶಾಲೆ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದರು.
ಸ್ವರ್ಣೋದ್ಯಮಿ ಬಲರಾಮ ಆಚಾರ್ಯ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಶಿಕ್ಷಣ ಕ್ಷೇತ್ರ ಒಂದು ಸವಾಲಿನ ಕ್ಷೇತ್ರವಾಗಿದ್ದು, ಅದನ್ನು ನಡೆಸುವುದು ಸುಲಭದ ಕೆಲಸವಲ್ಲ. ಶಿಕ್ಷಣ ಸಂಸ್ಥೆಗಳು ಬೆಳೆಯಬೇಕಾದರೆ ವಿದ್ಯಾಕ್ಷೇತ್ರದ ಮೇಲೆ ಪ್ರೀತಿ ಇರಬೇಕು ಜತೆಗೆ ಸಮಾಜಕ್ಕೆ ಕೊಡುಗೆ ನೀಡುವ ಭಾವನೆ ಇರಬೇಕು. ದೊಡ್ಡ ಮಟ್ಟದಲ್ಲಿ ಛಲ ಇವೆಲ್ಲವನ್ನು ಮೈಗೂಡಿಸಿಕೊಂಡು ದೃಢ ಸಂಕಲ್ಪದಿಂದ ಶಿಕ್ಷಣ ಕ್ಷೇತ್ರವನ್ನು ಕುಟುಂಬದ ಹಿರಿಯರ ನೆನಪಿನಲ್ಲಿ ಕಟ್ಟಿ ಬೆಳೆಸಿ ಮುನ್ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಯಾಗಿ ನಗರಸಭೆ ಸದಸ್ಯೆ ಗೌರಿ ಬನ್ನೂರು ಮಾತನಾಡಿ, ಶಿಕ್ಷಣ ಕ್ಷೇತ್ರ ಅಲ್ಲಿ ಕಲಿಯುವ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಎವಿಜಿ ಶಿಕ್ಷಣ ಸಂಸ್ಥೆ ಅಭಿವೃದ್ಧಿ ಪಥ ಕಾಣಲಿ ಎಂದರು.
ಸಂಸ್ಥೆಯ ಸಂಚಾಲಕ ಎ.ವಿ.ನಾರಾಯಣ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಅಲುಂಬುಡದಲ್ಲಿ ನಮ್ಮ ಸಮುದಾಯದವರು ಬಳಹ ಹಿಂದಿನಿಂದಲೂ ನೆಲೆಸಿದ್ದರು. ಹಿರಿಯರ ನೆನಪಿಗೋಸ್ಕರ ಶಾಲೆ ನಿರ್ಮಾಣ ಮಾಡಿದ್ದೇವೆ. ಎವಿಜಿ ಎಜ್ಯುಕೇಶನಲ್ ಟ್ರಸ್ಟ್ ನಿರ್ಮಿಸಿ, ಈ ಮೂಲಕ ಒಳ್ಳೆಯ ವಿದ್ಯಾಭ್ಯಾಸದ ಜತೆಗೆ ಸಮಾಜಕ್ಕೆ ಒಳ್ಳೆಯ ನಾಗರಿಕರನ್ನು ನೀಡುವ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಶಾಲೆ ಆರಂಭಿಸಿದ್ದೇವೆ. ಇದು ಪ್ರಥಮ ವರ್ಷದ ವಾರ್ಷಿಕೋತ್ಸವ ಎಂದರು.
ವೇದಿಕೆಯಲ್ಲಿ ಎವಿಜಿ ಆಂಗ್ಲ ಮಾಧ್ಯಮ ಶಾಲಾ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ, ಬನ್ನೂರು ಗ್ರಾಪಂ ಉಪಾಧ್ಯಕ್ಷ ಶೀನಪ್ಪ ಕುಲಾಲ್, ಶಾಲಾ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಗುಡ್ಡಪ್ಪ ಬಲ್ಯ, ಉಪಾಧ್ಯಕ್ಷ ಉಮೇಶ್ ಮಳುವೇಲು, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಗಣೇಶ್ ಉಪಸ್ಥಿತರಿದ್ದರು.
ಶಾಲಾ ಶಿಕ್ಷಕರು ಪ್ರಾರ್ಥನೆ ಹಾಡಿದರು. ಯಶುಭ ಭಗವದ್ಗೀತೆ ಪೀಠಿಕೆ ಮಂಡಿಸಿದರು. ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ನಡೆಸಿದ ವಿವಿಧ ಸ್ಪರ್ಧಾ ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿದರು. ವಿದ್ಯಾರ್ಥಿಗಳು, ಶಿಕ್ಷಕರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.