ಮತದಾನದ ಹಕ್ಕು ನೀಡಿದ ಭಾರತದ ಕ್ರಮ ಇತಿಹಾಸದಲ್ಲೇ ಪ್ರಥಮ

ಪುತ್ತೂರು: ಮತದಾನ ಜಾರಿಗೆ ಬಂದ ಪ್ರಥಮ ದಿನದಲ್ಲೇ ಪ್ರತಿಯೊಬ್ಬರಿಗೂ ಮತದಾನ ಮಾಡುವ ಹಕ್ಕು ನೀಡಿದ್ದು ಇತಿಹಾಸದಲ್ಲೇ ಭಾರತ ಪ್ರಥಮ. ಆದ್ದರಿಂದ ಯಾವುದೇ ಆಮಿಷಕ್ಕೊಳಗಾಗದೆ ಮತ ಚಲಾವಣೆ ಮಾಡುವುದನ್ನು ಯುವಜನತೆ ಅರಿತಿರಬೇಕು ಎಂದು ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮಹಾಪಾತ್ರ ಹೇಳಿದರು.

ಪುರಭವನದಲ್ಲಿ ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ’ ಎಂಬ ಧ್ಯೇಯ ವಾಕ್ಯದೊಂದಿಗೆ ನಡೆದ 14ನೇ ರಾಷ್ಟ್ರೀಯ ಮತದಾರರ ದಿನಾಚರಣೆಯ ಪ್ರತಿಜ್ಞಾವಿಧಿ ಬೋಧಿಸಿ ಯುವ ಮತದಾರರನ್ನುದ್ದೇಶಿಸಿ ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದ ಬ್ರಿಟಿಷ್ ಸರಕಾರದಲ್ಲಿ ಶ್ರೀಮಂತರಿಗೆ, ಗಣ್ಯರಿಗೆ ಮಾತ್ರ ಮತದಾನದ ಅವಕಾಶವಿತ್ತು. ಆದರೆ ಇಂದಿನ ಸರಕಾರದಲ್ಲಿ ಪ್ರತಿಯೊಬ್ಬನಿಗೂ ಮತದಾನದ ಹಕ್ಕು ನೀಡಲಾಗಿದೆ. ಇದು ಬ್ರಿಟಿಷ್ ಸರಕಾರ ಹಾಗೂ ಇಂದಿನ ಸರಕಾರಕ್ಕಿರುವ ವ್ಯತ್ಯಾಸ ಎಂದ ಅವರು, ಮತ ಚಲಾವಣೆಯಲ್ಲಿ ನಿಮ್ಮ ಸುತ್ತಮುತ್ತಲಲ್ಲಿ ಯಾವುದೇ ಆಮಿಷಗಳನ್ನೊಡ್ಡಿ ಮತದಾರರನ್ನು ಒಲಿಸುವ ವಿಚಾರಗಳಿದ್ದರೆ ತಕ್ಷಣ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಬೇಕು. ಯುವ ಮತದಾರರಿಗೆ ಗೂಗಲ್ ನಲ್ಲಿ ಮತದಾನದ ಮಹತ್ವದ ಕುರಿತು ಅರಿತುಕೊಳ್ಳುವಂತೆ ಕಿವಿಮಾತು ಹೇಳಿದರು.































 
 

ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ವಿಷ್ಣು ಗಣಪತಿ ಭಟ್ ಉಪನ್ಯಾಸ ನೀಡಿ, ಮತದಾನ ದಿನಾಚರಣೆಯ ಕಲ್ಪನೆ ಯುವ ಮತದಾರರ ಕುರಿತಾಗಿದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಮತದಾನ ಮಾಡಲು ಎಪಿಕ್ ಕಾರ್ಡ್ ಮಹತ್ವ ಪಡೆದಿದೆ. ಇದು ಆಧಾರ ಕಾರ್ಡ್ ಗಿಂತ ಮೌಲ್ಯಯುತವಾಗಿದೆ. ಈ ನಿಟ್ಟಿನಲ್ಲಿ ಯುವಜನತೆ ಈ ಕಾರ್ಡನ್ನು ಸದ್ಭಳಕೆ ಮಾಡಬೇಕು. ಯುವ ಮತದಾರರನ್ನು ಪಟ್ಟಿಗೆ ಸೇರ್ಪಡಿಸುವಲ್ಲಿ ಚುನಾವಣಾ ಆಯೋಗ ನಿರಂತರ ಕೆಲಸ ಕಾರ್ಯಗಳನ್ನು ಮಾಡುತ್ತಿದೆ ಎಂದ ಅವರು, ನಾವೆಲ್ಲಾ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ಯಾವುದೇ ಒಬ್ಬ ಪ್ರಜೆ ತನ್ನ ಒಂದು ಓಟಿನ ಮಹತ್ವವನ್ನು ಅರಿಯಬೇಕು. ಈ ಮೂಲಕ ಸಂವಿಧಾನಕ್ಕೆ ಗೌರವ ನೀಡಬೇಕು ಎಂದರು.

ವೇದಿಕೆಯಲ್ಲಿ ನಗರಸಭೆ ಪೌರಾಯುಕ್ತ ಮಧು ಎಸ್. ಮನೋಹರ್, ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ತಹಸೀಲ್ದಾರ್ ಶಿವಶಂಕರ ಉಪಸ್ಥಿತರಿದ್ದರು.

ಉಪತಹಸೀಲ್ದಾರ್ ಸುಲೋಚನಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭಲ್ಲಿ ಯುವ ಮತರಾರರಿಗೆ ಮತದಾರರ ಗುರುತಿನ ಚೀಟಿ ವಿತರಿಸಲಾಯಿತು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಸ್ವಾಗತಿಸಿದರು. ತಾಲೂಕು ಪಂಚಾಯಿತಿಯ ಭರತ್ ರಾಜ್ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top