ಪುತ್ತೂರು: ಶಾಲಾ ಕೊಠಡಿಯ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು ಸಾವಿರಾರು ರೂಪಾಯಿ ಮೌಲ್ಯದ ಸೊತ್ತುಗಳು ಹಾಗೂ ನಗದು ಹಣವನ್ನು ಕಳವುಗೈದ ಘಟನೆ ಕೊಳ್ತಿಗೆ ಗ್ರಾಮದ ಷಣ್ಮುಖದೇವ ಪ್ರೌಢಶಾಲೆಯಲ್ಲಿ ನಡೆದಿದೆ.
ಶನಿವಾರ ಸಂಜೆ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಕೃಷ್ಣವೇಣಿ ಎಸ್. ಶನಿವಾರ ಸಂಜೆ ಶಾಲೆಗೆ ಬೀಗ ಹಾಕಿ ತೆರಳಿದ್ದು, ಭಾನುವಾರ ಹಾಗೂ ಸೋಮವಾರ ಶಾಲೆಗೆ ರಜೆ ಇತ್ತು. ಮಂಗಳವಾರ ಬೆಳಿಗ್ಗೆ ಶಿಕ್ಷಕರಾದ ಅನಿರುದ್ಧ ಹಾಗೂ ವೀಣಾ ಕುಮಾರಿ ಶಾಲೆಗೆ ಬಂದಾಗ ಮುಖ್ಯ ಶಿಕ್ಷಕರ ಕೊಠಡಿಯ ಬೀಗ ಮುರಿದಿರುವುದು ಕಂಡು ಬಂದಿದೆ. ಈ ಬಗ್ಗೆ ಮುಖ್ಯಶಿಕ್ಷಕರಿಗೆ ಮಾಹಿತಿ ನೀಡಿದಂತೆ ಅವರು ಬಂದು ಪರಿಶೀಲಿಸಿದ್ದಾಗ ಮುಖ್ಯ ಶಿಕ್ಷಕರ ಕೊಠಡಿಯ ಬೀಗ ಮುರಿದು ಒಳಪ್ರವೇಶಿಸಿದ ಕಳ್ಳರು ಕಂಪ್ಯೂಟರ್ ಹಾಗೂ ಮಾನಿಟರ್, 2 ಕಪಾಟುಗಳಲ್ಲಿದ್ದ 14,500 ರೂ. ನಗದು ಹಣ, ಚಾರ್ಜರ್ ಲೈಟ್, 2 ಕಾರ್ಡ್ ಲೆಸ್ ಮೈಕ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಕಳವು ಗೈದಿರುವುದು ತಿಳಿದು ಬಂದಿದೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 73 ಸಾವಿರ ರೂ. ಅಂದಾಜಿಸಲಾಗಿದೆ.
ಶಿಕ್ಷಕರು ಸಿಸಿ ಕ್ಯಾಮೆರಾ ಆಫ್ ಮಾಡಿ ತೆರಳಿದ್ದರಿಂದ ಕಳ್ಳತನದ ಕ್ಯಾಮೆರಾ ಫೂಟೇಜ್ ಲಭ್ಯವಾಗಿಲ್ಲ. ಈ ಬಗ್ಗೆ ಮುಖ್ಯ ಶಿಕ್ಷಕರ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.