ಶ್ರೀ ರಾಮನ ಪ್ರಾಣಪ್ರತಿಷ್ಠೆ ಕಣ್ತುಂಬಿಕೊಂಡಿರುವುದು ನಮ್ಮ ಬಾಳಿನ ಸೌಭಾಗ್ಯ | ಕೆಲಿಂಜ ಶ್ರೀನಿಕೇತನದಲ್ಲಿ ನಡೆದ ಶ್ರೀರಾಮ ಪೂಜಾ ಮಹೋತ್ಸವದಲ್ಲಿ ಜಯಶ್ಯಾಮ್ ನೀರ್ಕಜೆ

ಕೆಲಿಂಜ: ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ನಡೆದ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠೆ ಅಂಗವಾಗಿ ಹಿಂದೂ ಧಾರ್ಮಿಕ ಸೇವಾ ಸಮಿತಿ ಕೆಲಿಂಜ ವತಿಯಿಂದ ಶ್ರೀರಾಮ ಪೂಜಾ ಮಹೋತ್ಸವ ಸೋಮವಾರ ಕೆಲಿಂಜ ಶ್ರೀನಿಕೇತನದಲ್ಲಿ ನಡೆಯಿತು.

ಆರ್‍.ಎಸ್‍.ಎಸ್‍.ನ ಹಿರಿಯರಾದ, ಸಾಮಾಜಿಕ ಕಾರ್ಯಕರ್ತ ಜಯಶ್ಯಾಮ್ ನೀರ್ಕಜೆ ಧಾರ್ಮಿಕ ಉಪನ್ಯಾಸ ನೀಡಿ, ಬಾಲರಾಮನ ಪ್ರತಿಷ್ಠೆ ಆಗಿದೆ. ಈ ಸಂದರ್ಭದಲ್ಲಿ ಜೀವಂತ ಇದ್ದು ರಾಮಪ್ರತಿಷ್ಠೆಯನ್ನು ಕಣ್ತುಂಬಿಕೊಂಡಿರುವುದು ನಮ್ಮ ಬಾಳಿನ ಸೌಭಾಗ್ಯ. 1992 ರಲ್ಲಿ ನಡೆದ ಬೃಹತ್ ಜನಾಂದೋಲನದಿಂದ ಬಾಬರಿ ಮಸೀದಿ ತೆಗೆದು ಸುಂದರ ಭವ್ಯ ರಾಮ ಮಂದಿರ ನಿರ್ಮಾಣಗೊಂಡಿದೆ. ಈ ಮೂಲಕ 500 ವರ್ಷಗಳ ಕನಸು ನನಸಾಗಿದೆ. ರಾಮ ಮಂದಿರ ನಿರ್ಮಾಣದ ಪೂರ್ವದಲ್ಲಿ ಶ್ರೀರಾಮ ಜಾನಕಿ ರಥಯಾತ್ರೆ ನಡೆಯಿತು, ಇಟ್ಟಿಗಳನ್ನು ಪ್ರತೀ ಹಳ್ಳಿಗಳಲ್ಲಿರುವ ಮನೆಗಳಿಂದ ಸಂಗ್ರಹಿಸಲಾಯಿತು. ಬಳಿಕ ಮಂದಿರದ ಲೋಕಾರ್ಪಣೆಗೆ ಕ್ಷಣಗಣನೆ ಇರುವ ಸಂದರ್ಭದಲ್ಲಿ ಮಂತ್ರಾಕ್ಷತೆಯನ್ನು ಪ್ರತಿ ಹಿಂದೂಗಳ ಮನೆ ಮನೆಗಗಳಿಗೆ ತಲುಪಿಸಲಾಯಿತು. ಇವೆಲ್ಲದರ ಪರಿಣಾಮ ಇಂದು ಭವ್ಯ ರಾಷ್ಟ್ರಮಂದಿರ ನಿರ್ಮಾಣಗೊಂಡು ಶ್ರೀರಾಮನ ಪ್ರತಿಷ್ಠೆಯೂ ನಡೆದಿದೆ ಎಂದರು.

ಹಿಂದೂ ಧಾರ್ಮಿಕ ಸೇವಾ ಸಮಿತಿ ಕಾರ್ಯಕರ್ತ ಪದ್ಮನಾಭ ಗೌಡ ಅಡ್ಯೆಯಿ ಪ್ರಾಸ್ತಾವಿಕವಾಗಿ ಮಾತನಾಡಿ, ನೂರಾರು ವರ್ಷಗಳಿಂದ ನಂಬಿಕೊಂಡು ಬಂದಿರುವ ಪುಣ್ಯ ಪುರುಷ ಶ್ರೀರಾಮನಿಗೆ ಮಂದಿರ ಅಯೋಧ್ಯೆಯಲ್ಲಿ ನಡೆಯಬೇಕು ಎಂಬುದು ಎಲ್ಲರ ಆಶಯ. ಅದರಂತೆ ಸಂಘ ಪರಿವಾರದ ಹೋರಾಟದಿಂದ ರಾಮ ಮಂದಿರ ನಿರ್ಮಾಣದ ಕನಸು ಇಂದು ನನಸಾಗಿದೆ ಎಂದರು.































 
 

ಶ್ರೀ ಕ್ಷೇತ್ರ ಕೆಲಿಂಜದ ಆಡಳಿತ ಮೊಕ್ತೇಸರ ಶಂಕರ ನಾರಾಯಣ ಭಟ್ ಪುಂಡಿಕಾಯಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಭಾರತೀಯ ಸೇನೆಯ, ಶಿಕ್ಷಕ ಗೋಪಾಲಕೃಷ್ಣ ನಾಯ್ಕ್‍, ಸ್ಥಳೀಯರಾದ ಚಂದ್ರಶೇಖರ ಬಂಗೇರ ಪಾಲ್ಗೊಂಡು ಶುಭ ಹಾರೈಸಿದರು. ಹಿಂದೂ ಧಾರ್ಮಿಕ ಸೇವಾ ಸಮಿತಿಯ ಚೇತನ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಚೇತನಾ, ತನ್ವಿ, ತೇಜಸ್ವಿ ಪ್ರಾರ್ಥನೆ ಹಾಡಿದರು. ಹಿಂದೂ ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷ ಶ್ರೀಧರ ಗೌಡ ನಡುವಲಚ್ಚಿಲ್ ಸ್ವಾಗತಿಸಿದರು.

ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಶ್ರೀರಾಮನಿಗೆ ಪೂಜಾ ಮಹೋತ್ಸವ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ಜರಗಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top