ಪುತ್ತೂರು: ನಗರದ ಬಪ್ಪಳಿಗೆಯ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ಶನಿವಾರ ಯುವಗಾಯಕಿ ಸೂರ್ಯಗಾಯತ್ರಿ ಹಾಗೂ ತಂಡದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು.
ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಹತ್ತನೆಯ ವರ್ಷಾಚರಣೆ – ದಶಾಂಬಿಕೋತ್ಸವ ಪ್ರಯುಕ್ತ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ಸಹಸ್ರಾರು ಜನ ಸಂಗೀತಾಸಕ್ತರು ಭಾಗಿಯಾಗಿ ರಸಾನುಭೂತಿಯನ್ನು ಆಸ್ವಾದಿಸಿದರು.
ಪುತ್ತೂರಿಗೆ ಮೊಟ್ಟಮೊದಲ ಬಾರಿಗೆ ಆಗಮಿಸಿದ್ದ ಸೂರ್ಯಗಾಯತ್ರಿ ಅಂಬಿಕಾ ಸಂಸ್ಥೆಯಲ್ಲಿ ತನ್ನ ಹಾಡನ್ನು ಆರಂಭಿಸುವಾಗ ತನ್ನ ತಾಯಿ ರಚಿಸಿದ ಗಣಪತಿ ಸ್ತುತಿ ’ಅಂಬಿಕಾ ಹೃದಯಾನಂದ ಮಾತೃಭಿ ಪರಿಪೂಜಿತಂ’ ಹಾಡಿನೊಂದಿಗೆ ಆರಂಭಿಸಿ ನೆರೆದವರ ಮನಸೂರೆಗೈದರು. ಸೂರ್ಯಗಾಯತ್ರಿಗೆ ಎಳೆಯ ವಯಸ್ಸಿನಲ್ಲಿಯೇ ಸಾಕಷ್ಟು ಖ್ಯಾತಿ ತಂದುಕೊಟ್ಟಿದ್ದ ಹನುಮಾನ್ ಚಾಲೀಸಾ ಹಾಡನ್ನು ಹಾಡಿ ಇಡಿಯ ಸಭೆ ತನ್ನೊಂದಿಗೆ ಹಾಡುವಂತೆ ಪ್ರೇರೇಪಿಸಿದರು. ’ಜಯ ಹನುಮಾನ್ ಜ್ಞಾನಗುಣ ಸಾಗರ’ ಸಾಲುಗಳು ಸೂರ್ಯಗಾಯತ್ರಿ ಕಂಠದಿಂದ ಹೊರಹೊಮ್ಮುತ್ತಿದ್ದಂತೆ ಇಡಿಯ ಸಭೆ ಕರತಾಡನದ ಮೂಲಕ ಸ್ವಾಗತಿಸಿದ್ದು ವಿಶೇಷವಾಗಿತ್ತು.
ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೂರ್ಯಗಾಯತ್ರಿಯವರ ’ರಾಮಚಂದ್ರ ಕೃಪಾಳು’ ಹಾಡಿನ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದು ಸಾಕಷ್ಟು ಸುದ್ದಿಯಾಗಿತ್ತು. ಆ ಹಾಡನ್ನು ಅಂಬಿಕಾದ ಶ್ರೀ ಲಲಿತಾಂಬಿಕಾ ವೇದಿಕೆಯಲ್ಲಿ ಪ್ರಸ್ತುತಪಡಿಸಿ ಕಾರ್ಯಕ್ರಮಕ್ಕೆ ಮೆರುಗನ್ನಿತ್ತರು. ಅಂತೆಯೇ ಜಗದೋದ್ಧಾರನ ಆಡಿಸಿದಳು ಯಶೋದೆ, ನೀಲಮೇಘ ಸುಂದರ ನಾರಾಯಣ ಗೋವಿಂದ, ಇವನೇ ರಾಮದಾಸ ಮೊದಲಾದ ಹಾಡುಗಳು ಅಪಾರ ಜನಮನ್ನಣೆಗೆ ಪಾತ್ರವಾದವು. ಈ ಮಧ್ಯೆ ಜಾನಪದ ಗೀತೆ ’ಸೋಜುಗಾರ ಸೂಜಿಮಲ್ಲಿಗೆ ಮಾದೇವ ನಿನ್ನಾ’ ಹಾಡಂತೂ ಇಡಿಯ ಸಭಾಂಗಣವನ್ನು ಆವರಿಸಿ ಸರ್ವರ ಖುಷಿಗೆ ಕಾರಣವಾಯಿತು. ಕೊನೆಯಲ್ಲಿ ’ಭಾಗ್ಯದಾ ಲಕ್ಷ್ಮೀ ಬಾರಮ್ಮಾ’ ಹಾಡನ್ನು ಹಾಡಿ ತಮ್ಮ ಎರಡೂವರೆ ಗಂಟೆಗಳ ನಿರಂತರ ಹಾಡಿಗೆ ಮುಕ್ತಾಯ ನೀಡಿದರು.
ವಯಲಿನ್‌ನಲ್ಲಿ ಗಣರಾಜ್ ಕಾರ್ಲೆ, ಮೃದಂಗದಲ್ಲಿ ಸೂರ್ಯಗಾಯತ್ರಿ ತಂದೆ ಪಿ.ವಿ.ಅನಿಲ್ ಕುಮಾರ್, ತಬಲದಲ್ಲಿ ಪ್ರಶಾಂತ್ ಶಂಕರ್ ಹಾಗೂ ರಿದಂಪ್ಯಾಡ್‌ನಲ್ಲಿ ಶೈಲೇಶ್ ಮರಾರ್ ಸಾಥ್ ನೀಡಿದರು.
ಈ ಸಂದರ್‍ಭದಲ್ಲಿ ಸೂರ್ಯಗಾಯತ್ರಿಯವರನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಸಂಗೀತ ವಿದ್ವಾಂಸ ವಿದ್ವಾನ್ ಕಾಂಚನ ಈಶ್ವರ ಭಟ್ಟರ ನೇತೃತ್ವದಲ್ಲಿ ಸನ್ಮಾನಿಸಲಾಯಿತು. ಸೂರ್ಯಗಾಯತ್ರಿ ತಾಯಿ ಪಿ.ಕೆ.ದಿವ್ಯಾ, ಸಹಕಲಾವಿದರನ್ನು ಗೌರವಿಸಲಾಯಿತು.
ಉದ್ಘಾಟನಾ : ಕರ್ನಾಟಕ ಸಂಗೀತ ಕಾರ್ಯಕ್ರಮವನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹಾಗೂ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ದಂಪತಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಆಡಳಿತ ಮಂಡಳಿ ಸದಸ್ಯರಾದ ಪುರಂದರ ಭಟ್, ಸುರೇಶ ಶೆಟ್ಟಿ, ಡಾ.ಎಚ್.ಮಾಧವ ಭಟ್, ಡಾ.ಎಂ.ಎಸ್.ಶೆಣೈ, ಬಾಲಕೃಷ್ಣ ಬೋರ್ಕರ್, ಪ್ರಸನ್ನ ಭಟ್, ಬಿಂದು ಫ್ಯಾಕ್ಟರಿ ಮಾಲಕ ಸತ್ಯಶಂಕರ್, ಜಿ.ಎಲ್.ಆಚಾರ್ಯ ಜ್ಯುವೆಲ್ಲರ್‍ಸ್ ಮಾಲಕ ಬಲರಾಮ ಆಚಾರ್ಯ, ನಗರಸಭಾ ಸದಸ್ಯ ಜಗನ್ನಿವಾಸ ರಾವ್, ವಿಶ್ರಾಂತ ಪ್ರಾಚಾರ್ಯ ವಿ.ಬಿ.ಅರ್ತಿಕಜೆ, ಶಾಲಾ ಪ್ರಿನ್ಸಿಪಾಲ್ ಮಾಲತಿ ಡಿ ಮೊದಲಾದವರು ಉಪಸ್ಥಿತರಿದ್ದರು. ಉಪನ್ಯಾಸಕರಾದ ಸತೀಶ್ ಇರ್ದೆ, ಅಕ್ಷತಾ ಕಾರ್ಯಕ್ರಮ ನಿರ್ವಹಿಸಿದರು. ದಶಾಂಬಿಕೋತ್ಸವ ಸಮಿತಿ ಅಧ್ಯಕ್ಷ, ನ್ಯಾಯವಾದಿ ಮಹೇಶ್ ಕಜೆ ವಂದಿಸಿದರು.