ಪುತ್ತೂರು: ಮೊಬೈಲ್ ವಿದ್ಯಾರ್ಥಿಗಳ ದೊಡ್ಡ ಶತ್ರು. ಪೋಷಕರು ತಮ್ಮ ಮಕ್ಕಳಿಗೆ ಇಂತಹ ಆಧುನಿಕ ತಂತ್ರಜ್ಞಾನ ನೀಡುವಾಗ ಎಚ್ಚರ ವಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್‍ಎಸ್.ಆರ್. ಹೇಳಿದರು.
ಎಸ್.ಆರ್.ಕೆ. ಲ್ಯಾಡರ್ಸ್‍ನ ಬೆಳ್ಳಿಹಬ್ಬ ಸಂಭ್ರಮದ ಪ್ರಯುಕ್ತ 4ನೇ ಸರಣಿ ಕಾರ್ಯಕ್ರಮ ಸೈಬರ್ ಕ್ರೈಂ ಹಾಗೂ ಆರೋಗ್ಯ ಕುರಿತು ಮಾಹಿತಿ ಕಾರ್ಯಾಗಾರ ಹಾಗೂ ತಾಯಂದಿರ ಸಭೆಯನ್ನು ನೆಲ್ಲಿಕಟ್ಟೆ ಡಾ.ಶಿವರಾಮ ಕಾರಂತ ಪ್ರೌಢಶಾಲೆಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ತಂದೆ ತಾಯಿಗೆ ತನ್ನ ಮಕ್ಕಳ ಬಗ್ಗೆ ಕನಸಿದೆ. ಈ ಕನಸನ್ನು ನನಸು ಮಾಡಲು ಮಕ್ಕಳು ಕಷ್ಟಪಟ್ಟು ಓದಿ ಒಳ್ಳೆಯ ಫಲಿತಾಂಶ ಪಡೆದು ಉತ್ತಮ ಉದ್ಯೋಗ ಪಡೆಯುವಲ್ಲಿ ಪ್ರಯತ್ನ ಪಡಬೇಕು. ಈ ನಿಟ್ಟಿನಲ್ಲಿ ಇಂದು ತಾಯಂದಿರ ಸಭೆ ಏರ್ಪಡಿಸಲಾಗಿದೆ ಎಂದ ಅವರು, ಡಾ.ಶಿವರಾಮ ಕಾರಂತ ಪ್ರೌಢಶಾಲೆ ಕಳೆದ ಬಾರಿ ಒಳ್ಳೆಯ ಫಲಿತಾಂಶ ಪಡೆದಿದೆ ಎಂದು ಶ್ಲಾಘಿಸಿದರು. ಸಾಮಾಜಿಕ ಕಳಕಳಿ ಹೊಂದಿರುವ ಎಸ್.ಆರ್.ಕೆ. ಲ್ಯಾಡರ್ಸ್ ಮಾಲಕರಾದ ಕೇಶವ ಎ. ಅವರು ಬೆಳ್ಳಿಹಬ್ಬ ಪ್ರಯುಕ್ತ ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಿದ್ದು, ಇದೀಗ ನಾಲ್ಕನೇ ಸರಣಿ ಕಾರ್ಯಕ್ರಮವಾಗಿ ಇಂತಹಾ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಗಳಾಗಿ ಎಸ್.ಆರ್.ಕೆ. ಲ್ಯಾಡರ್ಸ್ ಮಾಲಕರಾದ ಕೇಶವ ಎ. ಮಾತನಾಡಿ, 1990ರಲ್ಲಿ ಆರಂಭಗೊಂಡ ನಮ್ಮ ಎಸ್.ಆರ್.ಕೆ. ಲ್ಯಾಡರ್ಸ್ ಸಂಸ್ಥೆ ಹಲವು ಕೃಷಿ ಉಪಕರಣಗಳನ್ನು ತಯಾರಿಸುವ ಮೂಲಕ ಕರ್ನಾಟಕ, ಕೇರಳ, ಗೋವಾ, ತಮಿಳುನಾಡುಗಳಲ್ಲಿ ವ್ಯವಹಾರ ಹೊಂದಿದೆ. ಸಾಮಾಜಿಕ ಕಳಕಳಿ ಹೊಂದಿರುವ ಸಂಸ್ಥೆ ಬೆಳ್ಳಿಹಬ್ಬ ಸಂಭ್ರಮದಲ್ಲಿದೆ. ಆದಾಯದಲ್ಲಿ ಸಾಮಾಜಿಕ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಹತ್ತು ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಇಂದು ನಡೆಯುತ್ತಿರುವುದು ನಾಲ್ಕನೇ ಸರಣಿ ಕಾರ್ಯಕ್ರಮ. ಸಾಮಾಜಿಕ ಮಾಧ್ಯಮ ಹಾಗೂ ಮೊಬೈಲ್ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಸೈಬರ್ ಕ್ರೈಂ ಮಾಹಿತಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.
ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ದಿನೇಶ್ ಕಾಮತ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಲಾ ಮುಖ್ಯ ಶಿಕ್ಷಕಿ ಜಲಜಾಕ್ಷಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಪಾಲ್ಗೊಂಡಿದ್ದರು.
ತಾಲೂಕು ಆರೋಗ್ಯ ಕೇಂದ್ರದ ಪ್ರಸೂತಿ ತಜ್ಞೆ ಡಾ.ಅರ್ಚನಾ ಕಾವೇರಿ ಆರೋಗ್ಯ ಕುರಿತು, ಸಿಸಿಐ ಅಧಿಕಾರಿ ಪ್ರಣೀತಾ ಕೆ.ಎಸ್. ಸೈಬರ್ ಕ್ರೈಂ ಕುರಿತು ಮಾಹಿತಿ ನೀಡಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಾಲಾ ಮುಖ್ಯ ಶಿಕ್ಷಕಿ ಜಲಜಾಕ್ಷಿ ಸ್ವಾಗತಿಸಿದರು.