ಪುತ್ತೂರು: ಅಯೋಧ್ಯೆ ರಾಮ ಮಂದಿರ ನಿರ್ಮಾಣದ ವಿಚಾರದಲ್ಲಿ ಕಾಂಗ್ರೆಸ್ ನವರು ರಾವಣನ ಮನಸ್ಥಿತಿಯ ಹೇಳಿಕೆಗಳನ್ನು ನೀಡುವ ಮೂಲಕ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆರೋಪಿಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈಗಾಗಲೇ ರಾಮ ಮಂದಿರ ನಿರ್ಮಾಣದ ವಿಚಾರದಲ್ಲಿ ರಾಜಕೀಯ ಪ್ರವೇಶ ಆಗಿದೆ. ಈ ನಿಟ್ಟಿನಲ್ಲಿ ರಾಜಕೀಯ ಮರೆತು ಎಲ್ಲರೂ ದೇಶದ ಇತಿಹಾಸ, ಸಂಸ್ಕೃತಿಯನ್ನು ಇಡೀ ಜಗತ್ತಿಗೆ ಪರಿಚಯಿಸುವ ಕೆಲಸ ಆಗಬೇಕಾಗಿದೆ ಎಂದು ತಿಳಿಸಿದರು.
ರಾಮ ಮಂದಿರ ನಿರ್ಮಾಣದ ಪೂರ್ವದಲ್ಲಿ 6.5 ಲಕ್ಷ ಇಟ್ಟಿಗೆಗಳನ್ನು ಹಳ್ಳಿ ಹಳ್ಳಿಗಳಲ್ಲಿ 1.25 ರೂಪಾಯಿಯೊಂದಿಗೆ ಸಂಗ್ರಹ ಮಾಡುವ ಕೆಲಸವನ್ನು ವಿಶ್ವ ಹಿಂದೂ ಪರಿಷತ್ ಮಾಡಿದೆ. ಹಾಗೆಯೇ ಅಕ್ಷತೆಯ ವಿತರಣೆ ಕಾರ್ಯವೂ ನಡೆದಿದೆ. ಇನ್ನು ದೇಶದ ಅಸ್ಮಿತೆಯ ಸಂಕೇತವಾಗಿರುವ ರಾಮಮಂದಿರದ ನಿರ್ಮಾಣ ಕಾರ್ಯವನ್ನು ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಂದು ಸಂದೇಶ ನೀಡಿದ್ದಾರೆ. ಜ.22 ರಂದು ನಡೆಯುವ ಪ್ರಾಣಪ್ರತಿಷ್ಠೆಯಂದು ಧಾರ್ಮಿಕ ಕೇಂದ್ರಗಳಾದ ದೇವಸ್ಥಾನ, ಗರಡಿ, ದೈವಸ್ಥಾನಗಳಲ್ಲಿ, ಮಠ ಮಂದಿರಗಳಲ್ಲಿ ರಾಮಸ್ಮರಣೆಯೊಂದಿಗೆ ಶ್ರೀ ರಾಮನ ಭಾವಚಿತ್ರ ಇರುವ ಭಗವಧ್ವಜವನ್ನು ಹಾಕಿ ಭಜನೆ ಮೂಲಕ ಸಂಭ್ರಮವನ್ನು ಆಚರಿಸುವಂತೆ ಹಿಂದೂ ಬಾಂಧವರಲ್ಲಿ ವಿನಂತಿ ಮಾಡಿದರು. ಹಾಗೆಯೇ ಜ.22 ರಂದು ಕರ್ನಾಟಕದಲ್ಲೂ ಎಲ್ಲಾ ಸರಕಾರಿ ಕಚೇರಿಗಳಿಗೆ ರಜೆ ನೀಡುವಂತೆ ವಿನಂತಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಜೀವಂಧರ್ ಜೈನ್, ಸಾಜ ರಾಧಾಕೃಷ್ಣ ಆಳ್ವ, ಪಿ.ಜಿ.ಜಗನ್ನಿವಾಸ ರಾವ್, ನಿತಿಶ್ ಕುಮಾರ್ ಶಾಂತಿವನ ಉಪಸ್ಥಿತರಿದ್ದರು.