ಮಂಗಳೂರು: ಭಿನ್ನ ಸಮುದಾಯದ ವಿದ್ಯಾರ್ಥಿಗಳ ಮೇಲೆ ತಂಡವೊಂದು ಹಲ್ಲೆ ನಡೆಸಿ ನೈತಿಕ ಪೊಲೀಸ್ ಗಿರಿ ಘಟನೆ ಮಂಗಳೂರು ಕದ್ರಿ ಪಾರ್ಕ್ ನಲ್ಲಿ ನಡೆದಿದ್ದು ಈ ಸಂಬಂಧ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಶುಕ್ರವಾರ ಮಂಗಳೂರಿನ ಕಾಲೇಜೊಂದರ ಯುವಕ ಹಾಗೂ ನರ್ಸಿಂಗ್ ಮಾಡುತ್ತಿದ್ದ ವಿದ್ಯಾರ್ಥಿನಿ ಜತೆಯಾಗಿ ಬಸ್ ನಲ್ಲಿ ಮಂಗಳೂರಿಗೆ ಬಂದಿದ್ದರು. ಬಸ್ನಲ್ಲಿ ಅವರನ್ನು ಹಿಂಬಾಲಿಸಿಕೊಂಡು ಬಂದ ತಂಡ ಕದ್ರಿ ಪಾರ್ಕ್ ತಲುಪುತ್ತಿದ್ದಂತೆ ರಸ್ತೆಯಲ್ಲಿ ತಡೆದು ನೈತಿಕ ಪೊಲೀಸ್ ಗಿರಿ ನಡೆಸಿದೆ ಎನ್ನಲಾಗಿದೆ. ಈ ಸಂದರ್ಭ ಸ್ಥಳದಲ್ಲಿ ಜನ ಜಮಾಯಿಸಿದ್ದು, ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕದ್ರಿ ಪೊಲೀಸ್ ಠಾಣಾ ಪಿಎಸ್ ಐ ಉಮೇಶ್ ಕುಮಾರ್ ಹಾಗೂ ತಂಡ ಸ್ಥಳಕ್ಕೆ ಬಂದು ವಿದ್ಯಾರ್ಥಿಗಳಿಬ್ಬರನ್ನು ರಕ್ಷಿಸಿದ್ದಾರೆ.
ಹಲ್ಲೆ ನಡೆಸಿದ ತಂಡದಲ್ಲಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.