ಪುತ್ತೂರು: ತುಳುನಾಡಿನ ಜನಪದ ಕ್ರೀಡೆಯಾಗಿರುವ ಕಂಬಳವು ಉಡುಪಿ ಮತ್ತು ದ.ಕ. ಜಿಲ್ಲೆಯ ವಿವಿಧ ಕಡೆಗಳಲ್ಲಿ ಪ್ರತೀ ವರ್ಷವೂ ನಡೆಯುತ್ತಿದ್ದು ಜಿಲ್ಲೆಯಲ್ಲಿ ನಡೆಯುವ ಎಲ್ಲಾ ಕಂಬಳಗಳಿಗೂ ತಲಾ 5 ಲಕ್ಷ ರೂ. ಅನುದಾನ ನೀಡುವಂತೆ ಪುತ್ತೂರು ಶಾಸಕ ಅಶೋಕ್ ರೈ ಪ್ರವಾಸೋದ್ಯಮ , ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್‌ಗೆ ಮನವಿ ಸಲ್ಲಿಸಿದ್ದಾರೆ.
ಸಚಿವರನ್ನು ಶುಕ್ರವಾರ ಭೇಟಿಯಾದ ಶಾಸಕರು, ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ಪುರಾತನ ಕಾಲದಿಂದಲೂ ಕಂಬಳ ಕ್ರೀಡೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಕಂಬಳ ತುಳುನಾಡಿನ ಜನಪದ ಕ್ರೀಡೆಯಾಗಿದ್ದು ಅದನ್ನು ಉಳಿಸಿಕೊಂಡು ಹೋಗುವಲ್ಲಿ ತುಳುನಾಡಿನ ಕಂಬಳ ಪ್ರಿಯರು ಯಶಸ್ವಿಯಾಗಿದ್ದಾರೆ. ಕಂಬಳ ಕ್ರೀಡೆಯನ್ನು ನಡೆಸಬೇಕಾದರೆ ಲಕ್ಷಾಂತರ ರೂ. ಖರ್ಚುಗಳಿರುತ್ತದೆ. ಕಂಬಳಕ್ಕೆ ಸರಕಾರ ಕನಿಷ್ಠ 5 ಲಕ್ಷ ರೂ ಅನುದಾನವನ್ನು ನೀಡುವ ಮೂಲಕ ಪುರಾತನ ಜನಪದ ಕ್ರೀಡೆಯನ್ನು ಉಳಿಸುವಲ್ಲಿ ಸರಕಾರ ಸಹಕಾರವನ್ನು ನೀಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಶಾಸಕರ ಮನವಿಗೆ ಸ್ಪಂದಿಸಿದ ಸಚಿವರು ಸರಕಾರದಿಂದ ನೆರವು ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಬೆಂಗಳೂರು ಕಂಬಳ ಸಮಿತಿ ಕಾರ್ಯಾಧ್ಯಕ್ಷ ಮುರಳೀಧರ್ ರೈ ಮಠಂತಬೆಟ್ಟು, ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್ ಉಪಸ್ಥಿತರಿದ್ದರು.