ಪುತ್ತೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯಲು ಬಿಜೆಪಿ ಹಾಗೂ ಸಂಘ ಪರಿವಾರದವರು ಅಯೋಧ್ಯೆಯ ಅಪೂರ್ಣ ರಾಮ ಮಂದಿರದಲ್ಲಿ ತರಾತುರಿಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ಮಾಡಲು ಹೊರಟಿರುವುದು ಹಿಂದೂ ಸಮಾಜಕ್ಕೆ, ನೈಜ ರಾಮಭಕ್ತರಿಗೆ ಮಾಡುವ ಅವಮಾನ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಆರೋಪಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈಗಾಲೇ ಶ್ರೀರಾಮನ ಪ್ರಾಣ ಪ್ರತಿಷ್ಠೆ ಸಂದರ್ಭದಲ್ಲಿ ದೇಶದಲ್ಲಿ ಕಾಂಗ್ರೆಸ್ ನಾಯಕರು ಗೈರು ಹಾಜರಾಗುವ ಕುರಿತು ಬಹಿರಂಗ ಹೇಳಿಕೆ ಕೊಟ್ಟಿದ್ದು, ಈ ನೆಪವನ್ನಿಟ್ಟುಕೊಂಡು ಕಾಂಗ್ರೆಸ್ ನವರು ಹಿಂದೂ ವಿರೋಧಿ, ರಾಷ್ಟ್ರದ್ರೋಹಿಗಳು ಎಂದು ಬಿಂಬಿಸಲು ಹೊರಟಿದೆ. ಆದರೆ ಅಪೂರ್ಣವಾದ ಮಂದಿರದಲ್ಲಿ ಪ್ರಾಣಪ್ರತಿಷ್ಠೆ ಮಾಡುವ ಮೂಲಕ ರಾಜಕೀಯ ಲಾಭಕ್ಕಾಗಿ ಬೇಳೆ ಬೇಯಿಸಲು ಹೊರಟಿರುವಾಗ ನಿಜವಾದ ರಾಷ್ಟ್ರದ್ರೋಹಿಗಳು, ಹಿಂದೂ ವಿರೋಧಿಗಳು ಯಾರು ಎಂದು ಪ್ರಶ್ನಿಸಿದ ಅವರು, ಮುಂದಿನ ಚುನಾವಣೆಯಲ್ಲಿ ಬಿಜೆಪಿಯವರು ಮತ ಕೇಳುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ತಿಳಿಸಿದರು.
ಕೆಪಿಸಿಸಿ ವಕ್ತಾರ ಅಮಲ ರಾಮಚಂದ್ರ ಮಾತನಾಡಿ, ಪ್ರಸ್ತುತ ಇಡೀ ದೇಶದಲ್ಲಿ ಮರ್ಯಾದಾ ಪುರುಷನ ಭವ್ಯ ಮಂದಿರದ ವಿಚಾರದಲ್ಲಿ ಬಿಜೆಪಿ, ಸಂಘ ಪರಿವಾರದವರು ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಭಾರತದ ಇತಿಹಾದಲ್ಲೇ ಅಪೂರ್ಣ ಮಂದಿರದಲ್ಲಿ ಪ್ರಾಣಪ್ರತಿಷ್ಠೆ ನಡೆಯುವುದು ಇದೇ ಮೊದಲಾಗಿದ್ದು, ಈ ರೀತಿಯ ತರಾತುರಿ ಯಾಕೆ ಎಂದು ಪ್ರಶ್ನಿಸಿದ ಅವರು, ಇದರಿಂದ ತಿಳಿಯುತ್ತದೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇದನ್ನು ಅಸ್ತ್ರವಾಗಿ ತೆಗೆದುಕೊಂಡು ಅಧಿಕಾರ ಪಡೆಯುವ ಹುನ್ನಾರ ಎಂದು ಆರೋಪಿಸಿದ ಅವರು, ಪ್ರಾಣ ಪ್ರತಿಷ್ಠೆ ಸಂದರ್ಭ ಮಂದಿರದ ಗರ್ಭಗುಡಿಯನ್ನು ಪ್ರವೇಶಿಸುವುದು ಪ್ರಧಾನಿ ಮೋದಿ, ಆರ್ ಎಸ್ ಎಸ್ ನಾಯಕ ಮೋಹನ್ ಭಾಗವತ್, ಗುಜರಾತ್ ನ ಆನಂದ್, ಯೋಗೀ ಆದಿತ್ಯನಾಥ ಹಾಗೂ ಓರ್ವ ಅರ್ಚಕರು ಎಂದು ತಿಳಿದು ಬಂದಿದ್ದು, ತಂತ್ರಿಗಳು, ಅರ್ಚಕರನ್ನು ಬಿಟ್ಟು ಪ್ರಾಣ ಪ್ರತಿಷ್ಠೆ ಮಾಡುವುದು ರಾಮನಿಗೆ ಮಾಡುವ ದ್ರೋಹ. ನಿಜವಾದ ಹಿಂದೂ ವಿರೋಧಿ ಯಾರೆಂಬುದು ಇದರಿಂದ ತಿಳಿದು ಬರುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ರಂಜಿತ್ ಬಂಗೇರ, ರವೀಂದ್ರ ರೈ ನೆಕ್ಕಿಲು, ಮಹಾಲಿಂಗ ನಾಯ್ಕ್ ಉಪಸ್ಥಿತರಿದ್ದರು.