ಪುತ್ತೂರು: ಜಾಗದ ವಿವಾದ ಸಹಿತ ಅಯೋಧ್ಯೆಯ ಮಂತ್ರಾಕ್ಷತೆ ವಿತರಣಾ ಜವಾಬ್ದಾರಿ ನಮಗೆ ನೀಡಲಿಲ್ಲ ಎಂಬ ಕಾರಣಕ್ಕೆ ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡವರಿಂದ ನಮಗೆ ಹಲ್ಲೆ ನಡೆದಿದೆ ಎಂದು ಸೋಮವಾರ ರಾತ್ರಿ ಹಲ್ಲೆಗೊಳಗಾದ ಮುಂಡೂರು ನಿವಾಸಿ ಸಂತೋಷ್ ಬಿ.ಕೆ. ಆರೋಪಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮುಂಡೂರು ಪರಿಸರದಲ್ಲಿ ಅಕ್ಷತೆ ವಿತರಣೆ ಜವಾಬ್ದಾರಿಯನ್ನು ನನಗೆ ನೀಡಲಾಗಿದ್ದು, ಶುಕ್ರವಾರ ಮಂತ್ರಾಕ್ಷತೆ ವಿತರಿಸಿ ಉಳಿದ ಮಂತ್ರಾಕ್ಷತೆಯನ್ನು ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಇಟ್ಟಿದ್ದೇವು. ಅದೇ ರಾತ್ರಿ ಪುತ್ತಿಲ ಪರಿವಾರದವರು ನಮ್ಮಲ್ಲಿ ಕೇಳದೆ ಮಂತ್ರಾಕ್ಷತೆಯನ್ನು ದೇವಸ್ಥಾನದಿಂದ ತೆಗೆದುಕೊಂಡು ಹೋಗಿ ವಿತರಿಸಿದ್ದಾರೆ. ಇದೆಲ್ಲಾ ನಡೆದ ಬಳಿಕ ಸೋಮವಾರ ಕುಕ್ಕಿನಡ್ಕ ದೇವಸ್ಥಾನದಲ್ಲಿ ಮಂತ್ರಾಕ್ಷತೆ ಕುರಿತು ಸಭೆ ನಡೆದಿದ್ದು, ಸಭೆ ಮುಗಿಸಿ ರಾತ್ರಿ ಮನೆಗೆ ಹೋಗುವಾಗ ಕಾಲುದಾರಿಯಲ್ಲಿ ಧನಂಜಯ, ಕೇಶವ ಹಾಗೂ ಜಗದೀಶ್ ಎಂಬವರು ಏಕಾಏಕಿ ಕಬ್ಬಿಣದ ರಾಡು ಹಾಗೂ ಹೆಲ್ಮೆಟ್ ನಿಂದ ಹಲ್ಲೆ ಮಾಡಿದ್ದಾರೆ. ಬೊಬ್ಬೆ ಕೇಳಿ ನನ್ನ ತಾಯಿ ಸವಿತಾ ಅವರು ಸ್ಥಳಕ್ಕೆ ಬಂದಾಗ ಅವರನ್ನು ದೂಡಿ ಹಾಕಿದ್ದಾರೆ. ಪರಿಣಾಮ ಅವರಿಗೂ ಗಾಯವಾಗಿದೆ ಎಂದು ತಿಳಿಸಿದರು.
ಇದಲ್ಲದೆ ನಾಡಾಜೆ – ಬರೆಕೊಲಾಡಿ ರಸ್ತೆ ವಿವಾದವಿದ್ದು, ರಸ್ತೆಗಾಗಿ ನಮ್ಮ ವರ್ಗ ಜಾಗವನ್ನು ಬಳಸಿಕೊಂಡಿದ್ದರು. ಇದೇ ರಸ್ತೆಯನ್ನು ಮೂರು ವರ್ಷದ ಹಿಂದೆ ಬಂದ್ ಮಾಡಿದ್ದರು. ಬಳಿಕ ಜಾಗದ ವಿವಾದ ಮತ್ತೆ ಮತ್ತೆ ಮರುಕಳಿಸಿತ್ತು. ಈ ಘಟನೆಯಲ್ಲಿ ಸಂಪೂರ್ಣ ಪುತ್ತಿಲ ಪರಿವಾರದ ಕೈವಾಡವಿದೆ. ಈ ಕುರಿತು ಎಲ್ಲಿ ಬೇಕಾದರೂ ಬಂದು ನಾನು ಪ್ರಮಾಣ ಮಾಡುತ್ತೇನೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸವಿತಾ, ಸಂದೀಪ್ ಬಿ.ಕೆ. ಉಪಸ್ಥಿತರಿದ್ದರು.