ಪುತ್ತೂರು: ಕೋಡಿಂಬಾಡಿ ಗ್ರಾಮದ ಶಾಂತಿನಗರ ನಿವಾಸಿ ಕುಶಾಲಪ್ಪ ಪೂಜಾರಿ (61) ಮಂಗಳವಾರ ರಾತ್ರಿ ನಿಧನರಾಗಿದ್ದು, ಈ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.
ಕೋಡಿಂಬಾಡಿಯ ದಿ.ಮಾಂಕು ಪೂಜಾರಿಯವರ ಪುತ್ರರಾಗಿರುವ ಕುಶಾಲಪ್ಪ ಪೂಜಾರಿ ಮಂಗಳವಾರ ರಾತ್ತಿ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಮನೆಯವರು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆ ವೇಳೆಗಾಗಲೇ ಕುಶಾಲಪ್ಪ ಪೂಜಾರಿಯವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು. ಬಳಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಘಟನೆ ಬಳಿಕ ಮನೆಯಲ್ಲಿ ವಿಷ ಇದ್ದ ಬಾಟಲಿಯೊಂದು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ವೈದ್ಯರು ಪರೀಕ್ಷಿಸಿದಾಗ ಅಮಲು ಪದಾರ್ಥ ಅಥವಾ ವಿಷ ಪದಾರ್ಥ ಸೇವಿಸಿ ಮೃತಪಟ್ಟಿರುವುದಾಗಿ ವರದಿ ನೀಡಿದ್ದರು.
ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವಷ್ಟೇ ಸಾವು ಸಂಭವಿಸಿರುವ ಕುರಿತು ತಿಳಿದು ಬರಲಿದೆ.