ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಶನ್ ಜ. 17ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದೆ.
ಕೇಂದ್ರದ ಹಿಟ್ ಆಂಡ್ ರನ್ ಕಾನೂನು ವಿರೋಧಿಸಿ ಲಾರಿ ಮಾಲಕರು ಮುಷ್ಕರ ನಡೆಸಲಿದ್ದು, ಸಾರಿಗೆ ವಲಯದೊಂದಿಗೆ ಚರ್ಚಿಸದೆ ಈ ಕಾನೂನನ್ನು ಪರಿಚಯಿಸಿದೆ ಎಂದು ಆರೋಪಿಸಿದ್ದಾರೆ. ಈಗಾಗಲೇ ಶೇ. 27ರಷ್ಟು ಚಾಲಕರ ಕೊರತೆಯನ್ನು ಎದುರಿಸುತ್ತಿದ್ದು, ಈ ನಡುವೆ ಕಠಿಣ ಕಾನೂನಿನ ಭೀತಿಗೆ ಚಾಲಕ ವೃತ್ತಿಗೆ ಪ್ರವೇಶಿಸಲು ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲು ಕಾರಣವಾಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಅಪಘಾತ ಸಮಯದಲ್ಲಿ ಯಾರು ತಪ್ಪು ಮಾಡಿದ್ದಾರೆ ಎಂಬುದನ್ನು ಪರಿಗಣಿಸದೇ ಭಾರೀ ವಾಹನಗಳು ಎಂಬ ಕಾರಣಕ್ಕೆ ಸುಖಾಸುಮ್ಮನೆ ದೂಷಿಸಲಾಗುತ್ತಿದೆ ಎಂದು ಚಾಲಕರು ಆರೋಪಿಸಿದ್ದಾರೆ.
ಅಪಘಾತವಾದರೆ 10 ವರ್ಷಗಳ ಜೈಲು ಶಿಕ್ಷೆ ಸಹಿತ ಕಟ್ಟುನಿಟ್ಟಾದ ನಿಬಂಧನೆಗಳಿಂದಾಗಿ ಚಾಲಕರಲ್ಲಿ ಆತಂಕ ಹೆಚ್ಚಾಗಿದೆ. ಬಹುತೇಕ ಸಂದರ್ಭದಲ್ಲಿ ಸ್ಥಳೀಯರ ಬೆದರಿಕೆಯ ಪರಿಣಾಮ ಜೀವ ಭಯಕ್ಕೆ ಚಾಲಕರು ಅಪಘಾತ ಸ್ಥಳದಿಂದ ಕಾಲ್ಕಿತ್ತಿರುತ್ತಾರೆ. ಬಳಿಕ ಸ್ವ ಇಚ್ಚೆಯಿಂದ ಪೊಲೀಸರಿಗೆ ಶರಣಾಗುತ್ತಾರೆ. ಈ ನಿಟ್ಟಿನಲ್ಲಿ ಕಠಿಣ ಕಾನೂನು ಮೊರೆ ಹೋಗುವುದು ಸಮಂಜಸವಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೊಸ ಕಾನೂನು ಹೇಗಿದೆ ?:
ಅತೀ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆ, ಅಪಘಾತ ನಡೆಸಿ ಪರಾರಿಯಾದ ವ್ಯಕ್ತಿಯ ಸಾವಿಗೆ ಕಾರಣವಾದರೆ, ಅಪಘಾತ ನಡೆದ ಬಗ್ಗೆ ಅಧಿಕಾರಿಗಳಿಗೆ ವರದಿ ಮಾಡದೆ ಪರಾರಿಯಾದರೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ 7 ಲಕ್ಷ ರೂ. ದಂಡ ವಿಧಿಸುವುದು ಹೊಸ ಕಾನೂನಿನಡಿ ಬರುತ್ತದೆ.