ಪುತ್ತೂರು: ಪುತ್ತೂರಿನ ಹೊರವಲಯದ ಮುಂಡೂರು ಎಂಬಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತನ ಮೇಲೆ ನಡೆದ ಹಲ್ಲೆ ಪ್ರಕರಣ ಘಟನೆ ದಾರಿ ವಿವಾದಕ್ಕೆಯೇ ಹೊರತು ಅಕ್ಷತೆ ವಿಚಾರಕ್ಕೆ ಅಲ್ಲ ಎಂದು ದ.ಕ. ಜಿಲ್ಲಾ ಎಸ್ಪಿ ಸಿ.ಬಿ. ರಿಷ್ಯಂತ್ ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಹಲ್ಲೆಗೂ ರಾಮ ಅಕ್ಷತೆ ವಿತರಣೆಗೂ ಯಾವುದೇ ಸಂಬಂಧವಿಲ್ಲ. ಮುಂಡೂರಿನಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಅಕ್ಷತೆ ಹಂಚುವ ವಿಚಾರಕ್ಕೆ ನಡೆದ ಹಲ್ಲೆ ಅಲ್ಲ. ಅದು ಜಾಗದ ವಿಚಾರಕ್ಕೆ ನಡೆದ ಗಲಾಟೆ ಆಗಿದೆ. ಹಲ್ಲೆ ನಡೆಸಿದವರಿಗೂ, ಹಲ್ಲೆಗೊಳಗಾದ ಸಂತೋಷ್ ಕುಟುಂಬದ ಮಧ್ಯೆ ದಾರಿ ವಿಚಾರವಾಗಿ ವಿವಾದವಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ಗಲಾಟೆ ನಡೆದಿದೆ. ಈಗ ಎರಡೂ ಕಡೆಯವರು ದೂರು ನೀಡಿದ್ದಾರೆ. ಎರಡೂ ಕಡೆಯವರ ದೂರಿನಂತೆ ಪ್ರಕರಣ ದಾಖಲಾಗಿದೆ.
ಈ ಘಟನೆಯಲ್ಲಿ ಯಾವುದೇ ರಾಜಕೀಯ ದ್ವೇಷ ಅಥವಾ ಅಕ್ಷತೆಯ ವಿಚಾರವಿಲ್ಲ ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ.