ಪುತ್ತೂರು : ಜಮೀನಿನಲ್ಲಿ ಅಳವಡಿಸಿದ ತಂತಿ ಬೇಲಿ ವಿಷಯದಲ್ಲಿ ಗಲಾಟೆ ನಡೆದು ಅವಾಚ್ಯವಾಗಿ ನಿಂದಿಸಿ, ಹಲ್ಲೆ, ಜೀವ ಬೆದರಿಕೆ ಹಾಕಿರುವ ಕುರಿತು ಇತ್ತಂಡಗಳು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಮುಂಡೂರು ನಿವಾಸಿ ಸಂತೋಷ್ ಬಿ.ಕೆ ಎಂಬವರು ನೀಡಿರುವ ದೂರಿನ ಮೇರೆಗೆ ಕೇಶವ, ಧನಂಜಯ, ಜಗದೀಶ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಸಂತೋಷ್ ಸೋಮವಾರ ರಾತ್ರಿ ಆಕ್ಟಿವಾ ಸ್ಕೂಟರ್ ನಲ್ಲಿ ತಮ್ಮ ತೋಟದ ಹತ್ತಿರ ಬಂದು ವಾಹನ ನಿಲ್ಲಿಸಿ, ಅಲ್ಲಿಂದ ತಮ್ಮ ತೋಟದಲ್ಲಿ ನಡೆದುಕೊಂಡು ಮನೆಗೆ ಹೋಗುತ್ತಿರುವಾಗ ಕೇಶವ, ಧನಂಜಯ, ಜಗದೀಶ್ ಎಂಬವರು ತಡೆದು ನಿಲ್ಲಿಸಿ, ಹಲ್ಲೆ ನಡೆಸಿರುತ್ತಾರೆ. ಸಂತೋಷ್ ಅವರ ತಾಯಿ ಸ್ಥಳಕ್ಕೆ ಬಂದಾಗ ಕೇಶವ ಎಂಬಾತ ಅವರಿಗೂ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಗಲಾಟೆಯ ವೇಳೆ ಸಂತೋಷ್ ರವರ ಮೊಬೈಲ್ ಮತ್ತು 25 ಸಾವಿರ ರೂ. ಹಣವಿದ್ದ ಪರ್ಸ್ ಕಳೆದು ಹೋಗಿರುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇನ್ನೊಂದು ತಂಡದ ಮುಂಡೂರು ನಿವಾಸಿ ಕೇಶವ ನಾಯ್ಕ ನೀಡಿದ ದೂರಿನಂತೆ ಸಂದೀಪ್ ಮತ್ತು ಸಂತೋಷ್ ಅವರ ಪತ್ನಿಯರ ಮೇಲೆ ಹಾಗೂ ಸಂತೋಷ್, ಕೊರಗಪ್ಪ ನಾಯ್ಕ ಮತ್ತು ಅವರ ಪತ್ನಿ ಸವಿತಾ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಸೋಮವಾರ ರಾತ್ರಿ ಸಂದೀಪ ಮತ್ತು ಸಂತೋಷ ಅವರ ಪತ್ನಿಯರು ಕೇಶವ ನಾಯ್ಕ ಅವರ ಜಮೀನಿನ ತಂತಿ ಬೇಲಿಯನ್ನು ಕಿತ್ತು ಹಾಕಲು ಪ್ರಾರಂಭಿಸಿದ್ದು, ಈ ಬಗ್ಗೆ ಕೇಳಿದಾಗ ಕೇಶವ ನಾಯ್ಕ ಅವರಿಗೆ ಅವಾಚ್ಯವಾಗಿ ಬೈದು, ಜೀವ ಬೆದರಿಕೆ ಹಾಕಿದ್ದು, ಅಲ್ಲೇ ಇದ್ದ ಕೊರಗಪ್ಪ ನಾಯ್ಕ ಮತ್ತು ಅವರ ಪತ್ನಿ ಸವಿತಾ ಕೂಡಾ ಅವಾಚ್ಯವಾಗಿ ಬೈದಿದ್ದಾರೆ ಎಂದು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.